ಸುದ್ದಿವಿಜಯ, ಜಗಳೂರು: ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆ ನಂಬಿಕೆಯನ್ನು ಮಾಧ್ಯಮಗಳು ಉಳಿಸಿಕೊಂಡು ಸ್ವಾಭಿಮಾನದಿಂದ ಬದುಕಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು ಮಾಧ್ಯಮಗಳು ಮತ್ತು ಪತ್ರಕರ್ತರನ್ನು ಗಮನಿಸುತ್ತಿರುತ್ತಾರೆ.
ಸಮಾಜದಲ್ಲಿ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಹಾಗಾಗಿ ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇಂದು ನಮ್ಮಲ್ಲೇ ಮೊದಲು ಎಂಬ ಧಾವಂತದಲ್ಲಿ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸದೇ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಸತ್ಯಕ್ಕೆ ಚ್ಯುತಿ ಬಾರದಂತೆ ನೈಜ ಸುದ್ದಿಗಳನ್ನು ಪ್ರಕಟಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳು ಪ್ರಸರಣವಾಗುತ್ತಿವೆ.
ಜನರು ಸತ್ಯಕ್ಕಾಗಿ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ಪತ್ರಕರ್ತರು ತಮ್ಮನ್ನು ತಾವೇ ವಿಮರ್ಶೆಗೆ ಒಡ್ಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.
ದೇಹದ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದಂತೆ ಸಮಾಜದ ಕಾಯಿಲೆಗೆ ಪತ್ರಕರ್ತ ಚಿಕಿತ್ಸಕನಾಗಿ ಕೆಲಸ ಮಾಡಬೇಕಿದೆ. ಪತ್ರಕರ್ತರು ತಮ್ಮ ನಡೆ, ನುಡಿಯಲ್ಲಿ ಶುದ್ಧವಾಗಿರಬೇಕು.
ಈ ದೇಶದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಪತ್ರಕರ್ತರಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಚಿಕತ್ಸೆಯನ್ನು ಕೊಡುವಂತಹ ಕೆಲಸ ಪತ್ರಕರ್ತರಿಂದ ಆಗಬೇಕು, ಸತ್ಯದ ಮಾರ್ಗದಲ್ಲಿ ಪತ್ರಕರ್ತರು ಸಾಗಬೇಕು ಎಂದು ತಿಳಿಸಿದರು. ಸಲಹೆ ನೀಡಿದರು.
ಕಾ.ನಿ.ಪ. ಸಂಘದ ಅಧ್ಯಕ್ಷ ಜಿ.ಎಸ್ ಚಿದಾನಂದ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಅಣಬೂರು ಮಠದ ಕೊಟ್ರೇಶ್, ಬಸವರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡ ಮಹಮದ್ ಗೌಸ್,
ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್. ಎಂ ಐಹೊಳೆ, ಉಪಾಧ್ಯಕ್ಷ ವಾಸೀಂ, ಖಜಾಂಚಿ ಜಗದೀಶ್, ಕಾರ್ಯದರ್ಶಿ ಜೆ.ಓ ರವಿಕುಮಾರ್, ಪತ್ರಕರ್ತರಾದ ಎಸ್.ಎಂ.ಸೋಮನಗೌಡ, ಮಹಾಂತೇಶ್ ಬ್ರಹ್ಮ, ಮಂಜಯ್ಯ, ಸಂದೀಪ್, ಮಹಾಲಿಂಗ, ರಕೀಬ್, ಎಚ್.ಎಂ ಹೊಳೆ ಮಹಾಲಿಂಗಪ್ಪ, ಉಜ್ಜನಪ್ಪ ಸೇರಿದಂತೆ ಮತ್ತಿತರಿದ್ದರು.