ಸುದ್ದಿವಿಜಯ, ಜಗಳೂರು: ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ನಗರೋತ್ಥಾನ ಹಂತ ನಾಲ್ಕರ ಅಡಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಗಳ ಗುಣಮಟ್ಟವನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಗುರುವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.
ಪಟ್ಟಣದ ವಾರ್ಡ್ ನಂ 12ರ ವಿದ್ಯಾನಗರದಲ್ಲಿ ಕೆನರಾ ಬ್ಯಾಂಕ್ ನಿಂದ ನರಸಿಂಹಾಚಾರಿ ನಿವಾಸದವರೆಗೆ 157 ಮಿ, ಉದ್ದ ಹಾಗೂ 6 ಮೀ ಅಗಲದ ಅಂದಾಜು 15 ಲಕ್ಷ ರೂ ವೆಚ್ಚದ ಕಾಮಗಾರಿಯನ್ನು ಗುತ್ತಿಗೆದಾರ ಜಿ.ಎಸ್. ಸೈಯದ್ ಜಿಲಾನಿ ಎಂಬುವರಿಗೆ ರಸ್ತೆ ನಿರ್ಮಾಣ ಮಾಡಲು ಟೆಂಡರ್ ನೀಡಲಾಗಿತ್ತು.
ಕಾಮಗಾರಿ ಕ್ವಾಲಿಟಿ ಚಕ್ ಮಾಡಲು ಸರಕಾರದ ಆದೇಶದ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಖುದ್ದು ಭೇಟಿ ನೀಡಿ ಪರಿಶೀಲಿಸಿ ಕಾಂಕ್ರೀಟ್ ಕೋರ್ ಕಟ್ ಮಾಡಿಸುವ ಮೂಲಕ ಕಾಮಗಾರಿಯಲ್ಲಿ ಗುಣಮಟ್ಟ ಪರಿಶೀಲಿಸಿ ನಂತರ ಪಪಂ ಎಂಜಿನಯರ್ ಎಚ್.ಕೆ.ಶ್ರುತಿ ಅವರಿಂದ ಕಾಮಗಾರಿ ನಿರ್ಮಾಣ ಹಂತದ ಬಗ್ಗೆ ಮಾಹಿತಿ ಪಡೆದರು.ನಂತರ 17ನೇ ವಾರ್ಡ್‍ನ ಕೃಷ್ಣ ಬಡಾವಣೆಯಲ್ಲಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿ ಬಗ್ಗೆ ಪರಿಶೀಲಸಿದ ಅವರು ಅಲ್ಲಿಯೂ ಕಾಂಕ್ರೀಟ್ ಕೋರ್ ಕಟ್ ಮಾಡಿಸಿ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಂಡರು.
ನಂತರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ನಗರೋತ್ಥಾನ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಜಿಲ್ಲೆಯಾದ್ಯಂತ ನಡೆದಿರುವ ನಗರೋತ್ಥಾನ ಕಾಮಗಾರಿಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಜಗಳೂರು ಪಟ್ಟಣದಲ್ಲಿ ನಡೆದಿರುವ ನಗರೋತ್ಥಾನ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ.ಯೋಜನೆಯ ನಿಯಮಗಳಂತೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ.
ಈ ಬಗ್ಗೆ ಪಪಂ ಎಂಜಿನಿಯರ್ ಶ್ರುತಿ ಮತ್ತು ನಗರಾಭಿವೃದ್ಧಿ ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದ್ದೇನೆ. ಅಷ್ಟೇ ಅಲ್ಲ ನಾನೇ ಖುದ್ದು ಕಾಂಕ್ರೀಟ್ ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಿದ್ದು ಯಾವುದೇ ಲೋಪವಾಗದೇ ಇರುವುದು ಕಂಡು ಬಂದಿದೆ. ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ಸೇರಿದಂತೆ ಕಾಮಗಾರಿ ನಡೆದಿರುವ ತಾಲೂಕುಗಳಲ್ಲಿ ಗುಣಪಟ್ಟ ಪರಿಶೀಲಿಸಲಾಗುವುದು ಎಂದರು.ಈ ವೇಳೆ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿದೇರ್ಶಶಕ ಎನ್.ಮಹಾಂತೇಶ್, ಕಾರ್ಯಪಾಲಕ ಅಭಿಯಂತರ ಬಿ.ಎನ್ ಮಂಜುನಾಥ್, ತಹಶೀಲ್ದಾರ್ ಅರುಣ್ ಕಾರಗಿ, ಪಪಂ ಚೀಫ್ ಆಫೀಸರ್ ಎಚ್.ಕೆ. ಶ್ರುತಿ, ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಗುತ್ತಿಗೆದಾರ ಸೈಯದ್ ಜಿಲಾನಿ, ಆರೋಗ್ಯಾಧಿಕಾರಿ ಕಿಫಾಯತ್, ಗಂಗಾಧರ್ ಇದ್ದರು.