ಸುದ್ದಿವಿಜಯ, ಜಗಳೂರು: ತಾವು ನೋವು ಉಂಡರೂ ಸಹ ಸರ್ವರ ಹಿತಕ್ಕಾಗಿ ಬೃಹತ್ ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಆಯೋಜಿಸಿದ್ದ 66ನೇ ಮಹಾಪರಿನಿರ್ವಹಣಾ ದಿನವಾದ ಮಂಗಳವಾರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾದುದು. ಅವರ ಹೋರಾಟದ ಹಾದಿ ಬಗ್ಗೆ ನಾವೆಲ್ಲರೂ ತಿಳಿಯಬೇಕು. ಸಮ ಸಮಾಜ ನಿರ್ಮಾಣದ ಆಶಯ ಅವರದ್ದಾಗಿತ್ತು. ಎಲ್ಲ ವರ್ಗದ ಜನರು ಸಮಾನತೆಯಿಂದ ಬಾಳಬೇಕು ಎನ್ನುವ ದೃಷ್ಟಿಯಿಂದ ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರೂ ಪಾಲಿಸಬೇಕು.
ತುಳಿತಕ್ಕೊಳಗಾದ ಸಮುದಾಯಗಳ ನೋವುಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಪ್ರತಿಬ್ಬರೂ ಕೈಜೋಡಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಈ ವೇಳೆ ಎಸಿ ದುರ್ಗಶ್ರೀ, ತಹಶಿಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಇಓ ಚಂದ್ರಶೇಖರ್, ದಲಿತ ಮುಖಂಡರಾದ ಪೂಜಾರ್ ಸಿದ್ದಪ್ಪ, ಕುಬೇಂದ್ರಪ್ಪ, ಶಿವಣ್ಣ, ಚಂದ್ರಪ್ಪ, ಮಾರುತಿ, ಪಲ್ಲಾಗಟ್ಟೆ ರಂಗಪ್ಪ ಸೇರಿದಂತೆ ಅನೇಕರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.