ಸುದ್ದಿವಿಜಯ, ಜಗಳೂರು: ಪಂಚ ಭೂತಗಳಾದ ಗಾಳಿ, ನೀರು, ಅಗ್ನಿ, ಭೂಮಿ, ಆಕಾಶಗಳಲ್ಲಿ ಪ್ರತಿ ಜೀವರಾಶಿಗೂ ಅಗತ್ಯವಾದ ಪ್ರವ್ಯ ಎಂದರೆ ಅದು ನೀರು ಮಾತ್ರ. ನೀರನ್ನು ತೀರ್ಥದಂತೆ ಬಳಸಿದರೆ ಭವಿಷ್ಯದ ಜೀವ ರಾಶಿಗೆ ಉಳಿವು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಚಳ್ಳಕೆರೆ ರಸ್ತೆಯ ಕೆಎಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಕೇಂದ್ರ ಸರಕಾರದ ಜಲಶಕ್ತಿ ಸಚಿವಾಲಯ, ಸಣ್ಣನೀರಾವರಿ ಇಲಾಖೆ, ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ಅಟಲ್ ಭೂ ಜಲ ಯೋಜನೆ ಅರಿವು ಕಾರ್ಯಕ್ರಮ ಮತ್ತು ಅಂತರ್ಜಲ ನಿರ್ವಹಣೆ ಕುರಿತು ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೂ ನೀರು ಅತ್ಯಂತ ಅವಶ್ಯಕ. ಮಳೆ ನೀರಿನ ಕೊಯ್ಲಿನ ಮೂಲಕ ನೀರಿನ ಸಂರಕ್ಷಣೆ ಮಾಡುವ ವಿಧಾನ ಬಳಸಿಕೊಳ್ಳಬೇಕು. ಹನಿ ನೀರಾವರಿ ಮೂಲಕ ನೀರು ನಿರ್ವಹಣೆ ಮಾಡಿದರೆ ಮಾತ್ರ ಮಣ್ಣಿನ ಸವಕಳಿ ತಪ್ಪಿಸಬಹುದು.
ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು. ಆದರೆ ಈಬಾರಿ ಮಳೆಯಿಲ್ಲದೇ ಕೆರೆ, ಕಟ್ಟೆಗಳು ಬತ್ತಿ ಹೋಗಿವೆ. ನೀರು ಬಳಸ ಬೇಕಾದರೆ ಎಚ್ಚರವಾಗಿ ಬಳಸಬೇಕು. ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆ ನಾವೆಲ್ಲ ಬದ್ಧರಾಗಿರಬೇಕು.
ಮಳೆರಾಯ ಮುನಿಸಿನಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಗಬಹುದು. ನಾವೆಲ್ಲ ಜಾಗೃತರಾಗಿ ನೀರಿನ ಸದ್ಭಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ನೀರಿನ ನಿರ್ವಹಣೆಯ ಕುರಿತು ರೂಪಗಳು ಮನಮುಟ್ಟುವ ರೀತಿಯಲ್ಲಿ ನೆರವೇರಿದರೆ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಪಪಂ ಸದಸ್ಯ ರಮೇಶ್‍ರೆಡ್ಡಿ, ಗೌಸ್ ಅಹಮದ್, ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕದ ನೋಡಲ್ ಅಧಿಕಾರಿ ಆರ್.ಬಸವರಾಜ್, ಚಂದ್ರಗೌಡ, ಅರ್ಪಿತಾ, ಶ್ವೇತಾ, ಯಶವಂತ್, ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.