ಸುದ್ದಿವಿಜಯ, ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಬುಧವಾರ ಸಂಜೆ ೫.೩೦ಕ್ಕೆ ಸರಿಯಾಗಿ ದಶಮಿ ನಕ್ಷತ್ರದ ಮುಹೂರ್ತದಲ್ಲಿ ಅದ್ದೂರಿಯಾಗಿ ನೆರವೇರಿತು.
ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ತೇರಿಗೆ ಬಾಳೆಹಣ್ಣು, ತೆಂಗಿನ ಕಾಯಿ ಸಮರ್ಪಿಸಿ ಭಕ್ತಿಯಿಂದ ಶ್ರೀ ಬಸವೇಶ್ವರ ಸ್ವಾಮೀಗೆ ನಮಿಸಿದರು.
ದೇವಳದಿಂದ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯ ಮೇಲೆ ಹೊತ್ತು ತಂದ ಭಕ್ತರು ರಥೋತ್ಸವ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಿಸಿದ ನಂತರ ತೇರಿನಲ್ಲಿ ಪ್ರತಿಷ್ಠಾಪಿಸಿದರು.
ನಂತರ ದೇವರ ಪಟ ಹರಾಜು ಪ್ರಕ್ರಿಯೆ ನೆರವೇರಿತು. ಈ ಬಾರಿ ದೇವರ ಪಟ 45,101 ರೂಗಳಿಗೆ ಹರಾಜಾಯಿತು.
ರಥೋತ್ಸವ ಮುಂದಕ್ಕೆ ಚಲಿಸುತ್ತಿದ್ದಂತೆ ಬಾಳೆಯಣ್ಣು ತೂರಿದ ಭಕ್ತರು ಜೈ ಬಸವೇಶ್ವರ ಎಂದು ಜೈಂಕಾರ ಕೂಗಿದರು.
ನಂದಿಧ್ವಜ ಕುಣಿತ, ಡೊಳ್ಳು, ಸಮಾಳ, ಕಹಳೆ ಸೇರಿ ವಿವಿಧ ಜಾನಪದ ಕಲಾಪ್ರಕಾರಗಳ ಮೂಲಕ ಭಕ್ತಿಯಿಂದ ತೇರನ್ನು ಪಾದಕಟ್ಟೆಯವರೆಗೆ ಭಕ್ತರು ಎಳೆದರು.
ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನ ನಂದಿಹಳ್ಳಿ ಗ್ರಾಮದ ಭಕ್ತರು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು, ತುಮಕೂರು, ಚನ್ನಗಿರಿ, ದಾವಣಗೆರೆ, ಜಗಳೂರು, ಕೊಟ್ಟೂರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿಯಿಂದ ಬಸವೇಶ್ವರ ಸ್ವಾಮಿಗೆ ನಮಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಸೇರುದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.