ಜಗಳೂರು: ಕುಕ್ಕುಟೋದ್ಯಮಕ್ಕೂ ತಟ್ಟಿದ ಬರ, ನಷ್ಟದಲ್ಲಿ ಕೋಳಿ ಉದ್ಯಮ

Suddivijaya
Suddivijaya October 3, 2023
Updated 2023/10/03 at 2:50 AM

ಸುದ್ದಿವಿಜಯ, ವಿಶೇಷ, ಜಗಳೂರು: ಬರ ಕೇವಲ ಅನ್ನದಾತರಿಗಷ್ಟೇ ಅಲ್ಲ ಕುಕ್ಕುಟೋದ್ಯಮಕ್ಕೂ ತಟ್ಟಿದೆ. ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ತಾಲೂಕು ಎಂದರೆ ಜಗಳೂರು. ಆದರೆ ಈ ಬಾರಿ ಕೋಳಿಗಳಿಗೆ ಬೇಕಾಗುವ ಆಹಾರ ಉತ್ಪಾದನೆಯಲ್ಲಿ ಕುಂಠಿತವಾಗಿದ್ದು ಕೋಳಿ ಉದ್ಯಮ ನಡೆಸುವ ರೈತರಿಗೂ ಬರದ ಬಿಸಿ ತಟ್ಟಿದೆ.

ಹೌದು, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎನ್ನುವ ಮಾತಿನಂತೆ ಬರದ ಎಫೆಕ್ಟ್ ಕೇವಲ ಬೆಳೆ ಬೆಳೆದ ರೈತರಿಗಷ್ಟೇ ಅಲ್ಲ ಕೋಳಿ ಸಾಕಾಣೆ ಮಾಡುವ ರೈತರಿಗೂ ತಟ್ಟಿದ್ದು ಹೊಲಗಳಲ್ಲಿ ಕೋಳಿ ಫಾರ್ಮ್ ನಿರ್ಮಿಸಿ ಸಾಕಾಣೆ ಮಾಡುತ್ತಿದ್ದ ರೈತರು ತಮ್ಮ ಫಾರ್ಮ್‍ಗಳಲ್ಲಿ ಮರಿಗಳನ್ನು ಬಿಡದೇ ಮುಚ್ಚುವ ಸ್ಥಿತಿಗೆ ತಲುಪಿದ್ದಾರೆ.

ಬರದಿಂದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಪ್ರಸ್ತುತ ಕುಕ್ಕುಟೋದ್ಯಮಕ್ಕೂ ಬರದ ಛಾಯೆ ಆವರಿಸಿದೆ. ಮಳೆ ಕೊರತೆಯಿಂದ ಕೋಳಿ ಆಹಾರಗಳಿಗೆ ಬಳಸುವ ಮೆಕ್ಕೆಜೋಳ, ಸೋಯಾ, ಮೈಸ್ ಬೆಳೆಗಳ ಪ್ರಮಾಣ ಕುಸಿತದಿಂದಾಗಿ ಕೋಳಿ ಉತ್ಪಾದನೆ ದರ ಗಣನೀಯವಾಗಿ ಏರಿಕೆ ಕಂಡಿದ್ದು ಶೇ.40ರಷ್ಟು ಕೋಳಿ ದರ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಚಿಕನ್ ಪ್ರಿಯರ ಜೇಬಿಗೆ ಕತ್ತರಿ ಗ್ಯಾರಂಟಿಯಾಗಿದೆ.

ಉತ್ಪಾದನೆ ಖರ್ಚು ಹೆಚ್ಚಳ:

ಕೋಳಿ ಉತ್ಪಾದನೆಯ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಒಂದು ಕೋಳಿ ಮರಿಯ ದರ ಪ್ರಸ್ತುತ 44 ರೂ ಇದೆ.(ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತದೆ)ಸಾಗಾಣಿಕೆ ವೆಚ್ಚ 1 ರೂ ಜೊತೆಗೆ 45 ದಿನಗಳ ಕಾಲ ಕೋಳಿಗಳನ್ನು ಫಾರ್ಮ್‍ಗಳಲ್ಲಿ ಬಿಟ್ಟು ಸಾಕಬೇಕಾದರೆ ಅವುಗಳಿಗೆ ಬೇಕಾಗುವ ಮೆಕ್ಕೆಜೋಳ, ರಾಗಿ, ಸೋಯಾ ಮತ್ತು ಅವುಗಳಿಗೆ ಬೇಕಾಗುವ ಆಹಾರ ಉತ್ಪನ್ನಗಳ ಬೆಲೆಗಳು ಗಗನಕ್ಕೇರಿವೆ.

ಒಂದು ಕ್ವಿಂಟಾಲ್ ಮೆಕ್ಕೆಜೋಳದ ದರ 2450 ರೂ ನಿಂದ 2800 ರೂ ಇದೆ. ಒಂದು ಕ್ವಿಂಟಲ್ ಸೋಯಾ ಬೆಲೆ 5000 ರೂ ದಾಟಿದೆ. ಹೀಗಿ ಒಂದು ಕೋಳಿಯನ್ನು 45 ದಿನಗಳ ಕಾಲ ಸಾಕಲು ಕನಿಷ್ಠ 95 ರಿಂದ 100 ರೂ ಖರ್ಚು ಬರುತ್ತಿದೆ. ಆದರೆ ಅವುಗಳನ್ನು ಓಲ್‍ಸೆಲ್ ನಲ್ಲಿ ಮಾರುಕಟ್ಟೆಯಲ್ಲಿ 104 ರಿಂದ 105 ರೂ ದರ ಸಿಗುತ್ತಿದ್ದು ರೈತರಿಗೆ ಇದರಿಂದ ನಷ್ಟವಾಗುತ್ತಿದೆ. ಇದರ ಜೊತೆಗೆ ಕೊಳಿ ಬೆಳೆಯಲು ಹವಾಮಾನ ಕಡಿಮೆ ಉಷ್ಟಾಂಶವಿರಬೇಕು.

ಆದರೆ ಪ್ರಸ್ತುತ ಮಳೆಗಾಲವಾಗಿದ್ದರೂ ಸಹ ಬೇಸಿಗೆಯಂತೆ ತಾಪಮಾನವಿದ್ದು ಕೋಳಿಗಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ನಷ್ಟದಲ್ಲಿದ್ದು ಸಹವಾಸವೇ ಬೇಡ ಎಂದು ರೈತರು ಫಾರ್ಮ್‍ಗಳಿಗೆ ಬೀಗ ಹಾಕುತ್ತಿದ್ದಾರೆ.ಕೋಳಿ ಬೆಲೆ ತಲೆಬಿಸಿ :

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಕೋಳಿ ಮಾಂಸದ ದರ 200ರಿಂದ 220 ರೂ.ಗಿಂತ ಕಡಿಮೆಯಿಲ್ಲ. ಕೋಳಿಗೂ ಕೂಡ 155 ರಿಂದ 160 ರೂ. ದರವಿದೆ. ಶ್ರಾವಣದಲ್ಲೂ ಬೆಲೆ ಇಳಿಕೆಯಾಗಿಲ್ಲ. ಇದೀಗ ಬರದ ಬಿಸಿ ಕುಕ್ಕುಟೋದ್ಯಮಕ್ಕೂ ತಟ್ಟಲು ಆರಂಭವಾಗಿದೆ. ಇದರ ಪರಿಣಾಮವಾಗಿ ಬೆಲೆ ಏರಿಕೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಕೋಳಿ ಮಾಂಸದ ದರ ಶೇ.40 ರಷ್ಟು ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿಯೇ ಇದೆ.

ಕೋಳಿ ಶೆಡ್‍ಗಳು ಖಾಲಿ ಖಾಲಿ :

ತಾಲೂಕಿನ ಅನೇಕ ರೈತರು ಮತ್ತು ಕುಕ್ಕುಟೋದ್ಯಮಿಗಳು ದರ ಸಮರ ಮತ್ತು ಕೋಳಿಗಳಿಗೆ ಬೇಕಾಗುವ ಆಹಾರ ಮತ್ತು ಉಪ ಉತ್ಪನ್ನಗಳ ಬೆಲೆ ಗಗನಕ್ಕೇರಿರುವುದರಿಂದ ಕೋಳಿಗಳನ್ನು ಸಾಕಲು ಹಿಂದೆ ಸರಿಯುತ್ತಿದ್ದಾರೆ. ಹಾಗಾಗಿ ಕೋಳಿ ಶೆಡ್‍ಗಳು ಖಾಲಿ ಖಾಲಿಯಾಗಿವೆ. ಉತ್ಪಾದನಾ ವೆಚ್ಚ ಹೆಚ್ಚಳವಾದ ಹಿನ್ನೆಲೆ ಕೆಲ ಸಾಕಣೆದಾರರು ಕೋಳಿ ಸಾಕಲು ಮುಂದಾಗದೆ ಖಾಲಿ ಬಿಟ್ಟಿದ್ದಾರೆ. ಇದನ್ನು ನಂಬಿಕೊಂಡ ಕುಟುಂಬಗಳಿಗೂ ಸಂಕಷ್ಟ ಎದುರಾಗಿದೆ ಎಂದು ಮೆದಗಿನಕೆರೆ ಗ್ರಾಮದ ಕೋಳಿ ಸಾಕಾಣಿಕೆದಾರ ರೈತ ಎಂ.ಎಚ್.ಮಂಜುನಾಥ್ ನೋವು ತೋಡಿಕೊಂಡರು.

ಕೋಳಿಗಳ ಉತ್ಪಾದನೆ ತೀವ್ರ ಕುಸಿತ

ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕುಕ್ಕುಟೋದ್ಯಮ ಕಂಪನಿಗಳು ಮತ್ತು ರೈತರ ಫಾರ್ಮ್‍ಗಳಿಂದ ಅಂದಾಜು 60 ಲಕ್ಷ ಕೊಲಿ ಉತ್ಪಾದನೆ ಆಗುತ್ತಿತ್ತು. ಆದರೆ ಈ ವರ್ಷ ಜಗಳೂರು, ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಿಹರ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಕೋಳಿ ಉತ್ಪಾದನೆ ಕುಂಠಿತವಾಗಿದ್ದು ಈ ಸೀಜನ್ ನಲ್ಲಿ 25 ರಿಂದ 30 ಲಕ್ಷ ಮಾತ್ರ ಕೋಳಿ ಉತ್ಪಾದನೆಯಾಗುತ್ತಿದೆ. ಇದರಿಂದ ದರ ಏರುವ ಸಾಧ್ಯತೆ ಇದೆ ಎಂದು ಬಾಯ್ಲರ್ ಕೋಳಿ ಸಾಕಾಣಿಕೆದಾರರ ಸಂಘದ ಜಿಲ್ಲಾಧ್ಯಕ್ಷ ಓ.ಬಿ.ಗುರುಮೂರ್ತಿ ಕೋಳಿ ಉದ್ಯಮ ಸಂಕಷ್ಟದ ಬಗ್ಗೆ ನೋವು ತೋಡಿಕೊಂಡರು.

ಚಿಕನ್ ಪ್ರಿಯರಿಗೆ ಶಾಕ್ :ಬೆಲೆ ಏರಿಕೆಯಿಂದಾಗಿ ವೀಕೆಂಡ್‍ನಲ್ಲಿ ಕೋಳಿ ಕೊಂಡು ಹೋಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮೊದಲೆಲ್ಲ ಎರಡರಿಂದ ಮೂರು ಕೆಜಿ ಕೊಳ್ಳುತ್ತಿದ್ದವರು ಈಗ ಒಂದು ಕೆಜಿಗೆ ಸೀಮಿತವಾಗಿದ್ದಾರೆ. ಮತ್ತಷ್ಟು ಬೆಲೆ ಹೆಚ್ಚಾದರೆ ಕೋಳಿ ಅಡುಗೆಯ ಬಿಸಿಗಿಂತ ಬೆಲೆಯೇ ಜೇಬು ಸುಡಲಿದೆ. ಚಿಕನ್ ಅಂಗಡಿಗಳ ಮಾಲೀಕರು ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲು ಸಾಹಸ ಪಡುವಂತಾಗಿದೆ ಎಂದು ಪಟ್ಟಣದ ಕೋಳಿ ಅಂಗಡಿ ಮಾಲೀಕ ಎಂ.ಎಸ್.ನಜೀರ್ ಅಹಮದ್ ಹೇಳಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!