ಸುದ್ದಿವಿಜಯ, ಜಗಳೂರು:ಕನ್ನಡ ಭಾಷೆಯನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅವರ ಅವದಿಯಲ್ಲಿ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಿ ಕಲ್ಯಾಣ ಕರ್ನಾಟಕವನ್ನಾಗಿ ಮಾಡಿದ ಮಹಾನ್ ದೂರದೃಷ್ಟಿಯ ನಾಯಕ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪಪಂ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 108ನೇ ವರ್ಷದ ದಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ರಾಷ್ಟ್ರ ಕಂಡ ಮಹಾನ್ ಮುತ್ಸದಿ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸ್ ಅವರು ಅಗ್ರ ಗಣ್ಯರು. 1969 ರಿಂದ 1979 ದಶಕದಲ್ಲಿ ಅರಸು ಯುಗ ವೆಂದು ಹೇಳುವುದು ವಾಡಿಕೆಯಾಗಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ ಅತೀ ದೀರ್ಘಕಾಲ ಆಡಳಿತ ನಡೆಸಿ, ಸಮಾಜದ ಹಿಂದುಳಿದ ವರ್ಗದವರು, ದಲಿತರು ಮತ್ತು ಬಡಜನರನ್ನು ಜಾಗೃತಗೊಳಿಸಿದರು ಎಂದರು.
ಬಡವರ ಬದುಕಿನಲ್ಲಿ ಹೊಸ ಭರವಸೆ ತಂದುಕೊಟ್ಟ ಡಿ. ದೇವರಾಜ ಅರಸು ಕರ್ನಾಟಕದಲ್ಲಿ ಆರ್ಥಿಕ, ಸಾಮಾಜಿಕ ಆಂದೋಲನದ ಮೂಲಕ ಹಲವಾರು ಜನಹಿತ ಯೋಜನೆಗಳನ್ನು ಅನುಷ್ಠಾನ ಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದವರು.
ಮುಖ್ಯ ಶಿಕ್ಷಕ ಕೆ.ಎಸ್ ರವಿಕುಮಾರ್ ಮಾತನಾಡಿದರು, ದೇವರಾಜ ಅರಸು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲಾ, ತನಗೆ ಅಧಿಕಾರವಿದೆ ಎಂದು ದರ್ಪ ತೋರಿಸಿದವರಲ್ಲಾ, ಅವರ ಅಡಳಿತದಲ್ಲಿ ಹೆಚ್ಚು ಬಡವರು, ಹಿಂದುಳಿದ ವರ್ಗದ ಅಭಿವೃದ್ದಿಗೆ ಶ್ರಮಿಸಿದರು.
ನೆಲ, ಜಲ, ಭಾಷೆಯಲ್ಲೂ ಕಾಳಜಿ ಹೊಂದಿದ್ದ ಅರಸು ಕನ್ನಡದ ಬಗ್ಗೆ ತುಂಬ ಗೌರವವಿಟ್ಟುಕೊಂಡಿದ್ದರು ಎಂದರು. ಸಿದ್ದಮ್ಮನಹಳ್ಳಿ ಗ್ರಾಮದ ಅಲೆಮಾರಿ ಜನರಿಗೆ ಶಾಸಕ ಬಿ. ದೇವೇಂದ್ರಪ್ಪ ಹಕ್ಕು ಪತ್ರಗಳನ್ನು ವಿತರಿಸಿದರು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರೇಟ್ 2 ತಹಶೀಲ್ದಾರ್ ಮಂಜಾನಂದ, ತಾ.ಪಂ ವೈ.ಎಚ್ ಚಂದ್ರಶೇಖರ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಅಸ್ಮಾಭಾನು, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಮಹೇಶ್ವರಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಣ್ಣ ಸೂರಪ್ಪ, ವಾರ್ಡನ್ ದೇವೇಂದ್ರಪ್ಪ, ರಂಗಸ್ವಾಮಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.