Suddivijayaweb news/24/10/2023
ಸುದ್ದಿವಿಜಯ,ಜಗಳೂರು: ದಸರಾ ಮಹೋತ್ಸವ ಹಿನ್ನೆಲೆ ಮಂಗಳವಾರ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಬಸವೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಹೊತ್ತ ನೂರಾರು ಭಕ್ತರು ಬನ್ನಿ ಮಂಟಪದಲ್ಲಿ ದೇವರಿಗೆ ಬನ್ನಿ ಅರ್ಪಿಸುವ ಮೂಲಕ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ನಾಡ ಹಬ್ಬ ದಸರಾ ಉತ್ಸವವನ್ನು ಪ್ರತಿವರ್ಷ ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸುತ್ತಮುತ್ತ ಗ್ರಾಮದ ನೂರಾರು ಭಕ್ತರು ಬಸವೇಶ್ವರ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಬನ್ನಿ ಮಂಟಪಕ್ಕೆ ಕರೆದೊಯ್ಯುತ್ತಾರೆ.
ಅದಕ್ಕೂ ಮೊದಲ ದೇವಸ್ಥಾನದಲ್ಲಿ ಮೂರ್ತಿಗೆ ಮಹಾ ಮಂಗಳಾರತಿ ಮಾಡುವ ಮೂಲಕ ಹೂವಿನಿಂದ ಶೃಂಗಾರಗೊಳಿಸಿದ ಪಲ್ಲಕ್ಕಿಯಲ್ಲಿ ಕೂರಿಸಿ ನಂತರ ನಡೆ ಮಡಿಯಲ್ಲಿ ಬನ್ನಿ ಮಂಟಪದವರೆಗೆ ಭಕ್ತರು ಹೊತ್ತು ಅಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿದ ನಂತರ ಪೂಜೆ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.
ಈ ವೇಳೆ ಸಮಾಳ, ಡೊಳ್ಳು, ಮೇಳ, ನಂದಿಕೊಲು ಕುಣಿತ, ಅಲಗೆ ಸೇರಿದಂತೆ ವಿವಿಧ ಕಲಾಪ್ರಕಾರಗಳ ಮೂಲಕ ದೇವರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಬನ್ನಿ ಮಂಟಪದಲ್ಲಿ ಕುಳ್ಳಿರಿಸಿ ಬಿಲ್ಲಿಗೆ ಹೂವಿನ ಬಾಣ ಹೂಡಿ ಬನ್ನಿಗೆ ಅರ್ಪಿಸಿದ ನಂತರ ಭಕ್ತರು ಬನ್ನಿ ಕಿತ್ತು ‘ನಿಮ್ಮ ಬಾಳು ಬಂಗಾರವಾಗಲಿ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಬನ್ನಿ ಮಂಟಪದಿಂದ ಪುನಃ ದೇವರ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ದಸಾರ ಆಚರಿಸಲಾಯಿತು.