ಸುದ್ದಿವಿಜಯ, ಜಗಳೂರು: ಹೊಲಕ್ಕೆ ಹೋಗುವ ರಸ್ತೆ ಅತಿಕ್ರಮವಾಗಿದೆ… ರಸ್ತೆಗಳಲ್ಲಿ ಹಂಪ್‍ಗಳನ್ನು ಹಾಕದೇ ಅತಿವೇಗದ ಚಾಲನೆಯಿಂದ ಅಪಘಾತಗಳಾಗುತ್ತಿವೆ… ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಯೋಜನೆಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ… 22 ಗ್ರಾಪಂಗಳ ಪಿಡಿಓಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ… ಸರಕಾರಿ ವೈದ್ಯರು ಮಧ್ಯಾಹ್ನದ ವೇಳೆ ತಮ್ಮ ಕ್ಲೀನಿಕ್‍ಗಳಲ್ಲಿ ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ… ರಾಗಿ ಬೆಳೆಗೆ ಪರಿಹಾರ ಬಂದಿಲ್ಲ… ಹೀಗೆ ಹತ್ತು ಹಲವಾರು ಸಾರ್ವಜನಿಕರ ಅರ್ಜಿಗಳು ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ಅವರ ಮುಂದೆ ನಾಗರಿಕರು ತೋಡಿಕೊಂಡ ಸಮಸ್ಯೆಗಳು ಇವು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ಮತ್ತು ಎಸಿ ದುರ್ಗಶ್ರೀ ಹಾಗೂ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ನೇತೃತ್ವದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿದರು.
ಸುಮಾರು 18ಕ್ಕೂ ಹೆಚ್ಚು ಅರ್ಜಿಗಳು, 5ಕ್ಕೂ ಹೆಚ್ಚು ಮೌಖಿಕ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು.
ಇನ್ನು ಕೆಲವು ಅರ್ಜಿಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರವಾಗಿ ಬಗೆ ಹರಿಸಿ ಎಂದು ಸೂಚನೆ ನೀಡಿದರು.
ಇದೇ ವೇಳೆ ಡಿಎಸ್‍ಎಸ್ ಸಂಚಾಲಕ ಗೌರಿಪುರ ಸತ್ಯಮೂರ್ತಿ, ನಮ್ಮ ಪಟ್ಟಣದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಇಲ್ಲ. ಪಕ್ಕದ ಚನ್ನಗಿರಿ, ಹಿರಿಯೂರು ತಾಲೂಕುಗಳಲ್ಲಿ ಈಗಾಗಲೇ ಡಿಪೋಗಾಗಿ ಪೂಜೆ ನೆರವೇರಿದೆ.
ಸಾಕಷ್ಟು ಬಾರಿ ಮನವಿ ಮಾಡಿದರೂ ಬಗೆ ಹರಿದಿಲ್ಲ ಎಂದು ಗುರುಸಿದ್ದಪ್ಪ, ದಾದಾಪೀರ್, ಕುಮಾರ್, ಜಯರಾಮಪ್ಪ ಅವರು ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ರೈತ ಮುಖಂಡರಾದ ಲಕ್ಷ್ಮಣ ನಾಯಕ, ಗ್ರಾಪಂ ಪಿಡಿಒ ಎಟಿ ನಾಗರಾಜ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗೆಯೇ ಅನೇಕ ಪಿಡಿಒಗಳು ಕರ್ತವ್ಯಕ್ಕೆ ಹಾಜರಾಗದೇ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ.
ಪ್ರಭಾರ ಇಓ ಇರುವ ಕಾರಣ ಯಾರೂ ಅವರ ಮಾತು ಕೇಳುತ್ತಿಲ್ಲ. ಭ್ರಷ್ಟರಿಗೆ ದೊಡ್ಡ ದೊಡ್ಡ ಅಧಿಕಾರಿಗಳೇ ರಕ್ಷಣೆ ಮಾಡುತಿದ್ದಾರೆ ಕ್ರಮ ಕೈಗೊಳ್ಳಿ ಎಂದು ಡಿಸಿಗೆ ಮನವಿ ಮಾಡಿದರು.
ಬೆಸ್ಕಾಂ ಎಇಇಗೆ ಡಿಸಿ ತರಾಟೆ: ಅಕ್ರಮ ಸಕ್ರಮದ ಅಡಿ 2015ರಿಂದ 2022ರವರೆಗೂ ರೈತರಿಗೆ ಟಿಸಿ ನೀಡುವ ವಿಚಾರದಲ್ಲಿ ವಿಳಂಬ ದೋರಣೆ ಅನುಸರಿಸಿದ ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಅವರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಸೀನಿಯಾರಿಟಿ ಲೀಸ್ಟ್ ಪ್ರಕಾರ ನೋಟಿಸ್ ಬೋರ್ಡ್‍ಗೆ ಹಾಕಿ ಅವರಿಗೆ ಹಿಂಬರಹ ನೀಡಿ ಸೌಲಭ್ಯ ಕಲ್ಪಿಸಿ ಎಂದು ಸೂಚಿಸಿದರು. ಬಂಗಾರಕ್ಕನ ಗುಡ್ಡ ಗ್ರಾಮದಲ್ಲಿ ಬೆಳಕು ಯೋಜನೆ ಅಡಿ ಸೌಲಭ್ಯ ವಂಚಿತ ಗ್ರಾಮವನ್ನು ಕಡೆಗಣಿಸಲಾಗಿದೆ ಎಂದು ರೈತ ಮುಖಂಡ ಜಯರಾಮಪ್ಪ ಜಿಲ್ಲಾಧಿಕಾರಿಗಳಿಗೆ ದೂರಿದರು.ಆಗ ಜಿಲ್ಲಾಧಿಕಾರಿ ತಕ್ಷಣವೇ ಸೌಲಭ್ಯ ಕಲ್ಪಿಸಿ ಎಂದು ಸೂಚಿಸಿದರು.
ಮಗುವಿಗೆ ಸ್ಥಳದಲ್ಲೇ ಮಂಜೂರಾತಿ ಆದೇಶ ಪತ್ರ: ರಸ್ತೆಮಾಕುಂಟೆ ಗೊಲ್ಲರಹಟ್ಟಿ ಗ್ರಾಮದ ಸಿದ್ದಾರ್ಥ ಎಂಬ ದಿವ್ಯಾಂಗ ಚೇತನ ಮಗುವಿಗೆ ಡಿಸಿ ಸ್ಥಳದಲ್ಲೇ ಮಾಸಾಶನ ಪತ್ರ ನೀಡಿ ಸರಕಾರದ ಸೌಲಭ್ಯ ಕಲ್ಪಿಸಿದರು. ಮಗು ಅನೇಕ ವರ್ಷಗಳಿಂದ ಮಾಸಾಶನವಿಲ್ಲದೇ ಆರ್ಥಿಕವಾಗಿ ಕುಂಠಿತವಾಗಿದ್ದ ಕುಟುಂಬಕ್ಕೆ ಡಿಸಿ ನೆರವಾದರು.
ಎಫ್‍ಪಿಒಗೆ ಜಮೀನು ಮಂಜೂರಾತಿಗೆ ಪರಿಶೀಲನೆ: ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗೆ ಆರಂಭವಾಗಿದ್ದು ರೈತರಿಗೆ ಈ ಕಂಪನಿಯಿಂದ ಅನೇಕ ಸೌಲಭ್ಯಗಳು ದೊರೆಯುತ್ತಿದೆ.
ಆದರೆ ಜಾಗದ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೂ ಮನವಿ ಮಾಡಿದ್ದೇವೆ.ಅವರು ಒಪ್ಪಿದ್ದು ತಾವು ತಹಶೀಲ್ದಾರ್ ಅವರಿಗೆ ಸರಕಾರದ ರೆವೆನ್ಯೂ ಜಮೀನು ನೀಡಿ ಎಂದು ಸೂಚನೆ ನೀಡಬೇಕು ಎಂದು ಅಧ್ಯಕ್ಷ ಎಂ.ಎಚ್.ಮಂಜುನಾಥ್ ಹಾಗೂ ನಿರ್ದೇಶಕರು ಮನವಿ ಮಾಡಿದರು.
ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ಮತ್ತು ತಹಶೀಲ್ದಾರ್ ಸಂತೋಷ್‍ಕುಮಾರ್ ಅವರಿಗೆ ಜಾಗ ಗುರುತಿಸಿ ಎಂದು ಸೂಚನೆ ನೀಡಿ ಭೂಮಿ ಮಂಜೂರಾತಿಗೆ ಕಾನೂನು ಮೂಲಕ ಕ್ರಮ ವಹಿಸಲಾಗುವುದು ಎಂದರು.
ತಾಪಂ ಸಂಬಂಧಿಸಿದ ಹೆಚ್ಚು ಅರ್ಜಿಗಳು: ಸಾರ್ವಜನಿಕರ ಕುಂದು ಕೊರತೆಯಲ್ಲಿ ಅತಿ ಹೆಚ್ಚು ತಾಪಂ ಸಂಬಂಧಿಸಿದ ದೂರುಗಳೇ ಬಂದಿವೆ. ನೀವು ಸಮಸ್ಯೆ ಬಗೆ ಹರಿಸಬೇಕು. ಎಲ್ಲ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಕಚೇರಿಗೆ ರವಾನಿಸುವುದು ಸಲ್ಲ ಎಂದು ತಾಪಂ ಇಓ (ಪ್ರಭಾರಿ) ವೈ.ಎಚ್.ಚಂದ್ರಶೇಖರ್ ಅವರಿಗೆ ಡಿಸಿ ಸೂಚನೆ ನೀಡಿದರು.
ಸಭೆಯಲ್ಲಿ ಎಸಿ ದುರ್ಗಶ್ರೀ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಇಓ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆ ಎಡಿಎ ಮಿಥುನ್‍ಕಿಮಾವತ್, ಪಿಡ್ಲ್ಯೂಡಿ ಎಇಇ ಯು.ರುದ್ರಪ್ಪ, ಹಿಂದುಳಿದ ಅಲ್ಪಸಂಖ್ಯಾತ ಇಲಾಖೆ ಕಲ್ಯಾಣಾಧಿಕಾರಿ ಆಸ್ಮಾಬಾನು, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಟಿಎಚ್‍ಒ ನಾಗರಾಜ, ಬೆಸ್ಕಾಂ ಎಇಇ ಗಿರೀಶ್ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಅಲೆಮಾರಿ, ಅರೆ ಅಲೆಮಾರಿ ಜನರಿಗೆ ಗುಡ್ ನ್ಯೂಸ್
ತಾಲೂಕಿನ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರಿಗೆ ಉದ್ದಘಟ್ಟ ಸಮೀಪ ಒಂದೂವರೆ ಎಕರೆ ಜಮೀನನ್ನು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಗುರುತಿಸಿದ್ದು ಸಮುದಾಯದ ಜನರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಶೀಘ್ರದಲ್ಲೇ ಆಗಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ಪತ್ರಕರ್ತರಿಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ, ಅರೆ ಅಲೆಮಾರಿ ಮತ್ತು ಸುಡುಗಾಡು ಸಿದ್ದರು, ಶಿಳ್ಳೆಕ್ಯಾತರಿಗೆ ನಿವೇಶನ ನೀಡಲು ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. 46 ಕುಟುಂಬಗಳಿದ್ದು ಪಾರದರ್ಶಕವಾಗಿ ನಿವೇಶನ ಹಂಚಿಗೆ ಸೂಚನೆ ನೀಡಲಾಗಿದೆ ಎಂದರು.
ಸಭೆಯ ನಂತರ ಡಿಸಿ ಉದ್ದಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈವೇಳೆ ಕೆಲ ಗ್ರಾಮಸ್ಥರು ನಮಗೆ ನಿವೇಶನದ ಅವಶ್ಯಕತೆ ಇದೆ. ಬೇರೆ ಉದ್ದೇಶಕ್ಕೆ ನಮ್ಮ ಗ್ರಾಮದ ಜಮೀನು ನೀಡಬೇಡಿ ಎಂದು ಡಿಸಿ ಅವರಿಗೆ ತಿಳಿಸಿದರು. ಆಗ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಿಮ್ಮ ಗ್ರಾಮಕ್ಕೆ 5 ಎಕರೆ ಜಮೀನನ್ನು ಆಶ್ರಯ ಯೋಜನೆಗಾಗಿ ಕಾಯ್ದಿರಿಸಲಾಗಿದೆ.
ಎಲ್ಲ ಭೂಮಿಯನ್ನು ನಿಮ್ಮ ಗ್ರಾಮಕ್ಕೆ ಕೊಡಲು ಸಾಧ್ಯವಿಲ್ಲ. ಆ ಸಮುದಾಯದವರು ಪರಿಗಣಿಸಿ ಮಾನವೀಯತೆ ತೋರಿಸಿ ಎಂದು ತಿಳಿಸಿದರು. ಇದಕ್ಕೆ ಯಾರಾದರೂ ಅಡ್ಡಿ ಪರಿಸಿದರೆ ಕಾನೂನು ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.