ಸುದ್ದಿವಿಜಯ, ಜಗಳೂರು: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ ಜಿಲ್ಲೆಗಳ ರೈತರಿಗೆ ಬರಪರಿಹಾರ ಬಿಡುಗಡೆ ಮಾಡಲಾಗಿರುವ ಹಣ ತಾಲೂಕಿನ ಸಾಕಷ್ಟು ರೈತರ ಖಾತೆಗಳಿಗೆ ಜಮೆಯಾಗದ ಹಿನ್ನೆಲೆ ರೈತರು ತಾಲೂಕು ಕಚೇರಿಯಲ್ಲಿ ಬರ ಪರಿಹಾರಕ್ಕಾಗಿ ಗುರುವಾರ ಮುಗಿಬಿದ್ದಿದ್ದರು.
ತಾಲೂಕಿನ 27263 ರೈತರಿಗೆ 5,36,64,034 ಕೋಟಿ ಬಿಡುಗಡೆಯಾಗಿದೆ. ಆದರೆ ಸಾಕಷ್ಟು ರೈತರ ಖಾತೆಗಳಿಗೆ ಇನ್ನು ಹಣ ಬಿಡುಗಡೆಯಾಗಿಲ್ಲ. ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಎಫ್ಐಡಿಯೊಂದಿಗೆ ಬರುವ ರೈತರು ಹಣ ಬಂದಿಲ್ಲ ಸ್ವಾಮಿ ಎಂದು ಕೇಳುತ್ತಾ ಅಧಿಕಾರಿಗಳನ್ನು ದಿನವಿಡೀ ಪ್ರಶ್ನಿಸುವ ದೃಶ್ಯ ಕಂಡು ಬಂತು.ಜಗಳೂರು ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಬರಪರಿಹಾರ ಬಾರದ ಹಿನ್ನೆಲೆ ರೈತರು ಕಚೇರಿ ಭೇಟಿ ನೀಡಿ ಪರೀಶಿಲಿಸಲು ಮುಗಿಬಿದ್ದ ಚಿತ್ರ.
ಕಳೆದ 5 ದಿನಗಳಿಂದಲೂ ತಾಲೂಕು ಕಚೇರಿಯಲ್ಲಿ ಬರ ಪರಿಹಾರ ಬಾರದ ರೈತರು ಭೇಟಿ ನೀಡಿ ಅಲೆದು ಅಲೆದು ರೋಸಿ ಹೋಗಿದ್ದಾರೆ. ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಹಿನ್ನೆಲೆ ಇರುವ ಒಬ್ಬರು ಅಥವಾ ಇಬ್ಬರು ಸಿಬ್ಬಂದಿ ನೂರಾರು ರೈತರಿಗೆ ಉತ್ತರ ಕೊಡಬೇಕು.
ದಾಖಲೆಗಳನ್ನು ಪರಿಶೀಲಿಸಬೇಕು. ರೈತರು ಕೇಳು ಪ್ರಶ್ನೆಗಳಿಗೆ ಉತ್ತರಿಸಬೇಕು. ಜಿಲ್ಲಾಡಳಿತ ತೆರೆದಿರುವ ಸಹಾಯವಾಣಿ ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ಎಲ್ಲ ರೈತರು ದಾಖಲೆಗಳೊಂದಿಗೆ ತಾಲೂಕು ಕಚೇರಿ, ಕೃಷಿ ಇಲಾಖೆ ಕಚೇರಿ ಹೀಗೆ ಸಂಬಂಧ ಪಟ್ಟ ಇಲಾಖೆಗಳಿಗೆ ಅಲೆದು ಅಲೆದು ಹೈರಾಣಾಗಿ ಹೋದರು.
ಸಿಬ್ಬಂದಿ ವ್ಯವಸ್ಥೆಯಿಲ್ಲ:
ದಿನವಿಡೀ ಕಾದರೂ ನಮಗೆ ಬರಪರಿಹಾರದ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಮಿನಮೇಷ ಎಣಿಸುತ್ತಿದ್ದಾರೆ. ಸಿಬ್ಬಂದಿ ವ್ಯವಸ್ಥೆಯಿಲ್ಲ. ಇರುವ ಒಬ್ಬಿಬ್ಬರು ಸಿಬ್ಬಂದಿ ಎಷ್ಟು ಅಂತ ಕೆಲಸ ಮಾಡುತ್ತಾರೆ. ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಅವರು ಸಿಬ್ಬಂದಿ ನಿಯೋಜಿಸಿ ಬರ ಪರಿಹಾರದ ಬಗ್ಗೆ ರೈತರಿಗೆ ಮಾಹಿತಿ ನೀಡಲಿ ಎಂದು ರೈತರಾದ ಚಂದ್ರಣ್ಣ, ಬಸವರಾಜಪ್ಪ ಸೇರಿದಂತೆ ಅನೇಕರು ಆಗ್ರಹಿಸಿದರು.