ಸುದ್ದಿವಿಜಯ, ಜಗಳೂರು: ಕ್ಷೇತ್ರದಲ್ಲಿ ಚುನಾವಣಾ ರಣಕಹಳೆ ಮೊಳಗುತ್ತಿದೆ. ಕೇವಲ ಆರು ದಿನಗಳಷ್ಟೇ ಚುನಾವಣೆಗೆ ಬಾಕಿ ಉಳಿದಿದೆ. ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಅಭಿವೃದ್ಧಿ ಸೋಲಿನ ಬೆನ್ನುಹತ್ತಿ ಮತಯಾಚನೆ ಮಾಡುತ್ತಿದ್ದಾರೆ.
ಹೌದು, ದಾವಣಗೆರೆ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿರುವ ಜಗಳೂರು ಜನತೆಯ ಮತದಾರರಿಗೆ ‘ಮೊಣಕೈಗೆ ಬೆಣ್ಣೆಹಚ್ಚಿ’ತಮ್ಮ ಬೇಳೆ ಬೇಯಿಸಿಕೊಂಡ ಜನಪ್ರತಿನಿ ವಿರುದ್ಧ ಮತದಾರ ಸಿಡಿದೆದ್ದು ಬದಲಾವಣೆ ಬಯಸಿದ್ದಾರೆ ಎಂಬುದು ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಮತದಾರರಿಗೆ ಅಭಿವೃದ್ಧಿಯ ಹಿನ್ನಡೆಯ ಅಸ್ತ್ರವನ್ನು ಬಳಸಿ ಮತಯಾಚನೆಯಲ್ಲಿ ಪೈಪೋಟಿಗೆ ಬಿದ್ದಿದ್ದಾರೆ.
ಆಡಳಿತ ಪಕ್ಷ ಡಬಲ್ ಎಂಜಿನ್ ಸರಕಾರ ಮಾಡಿರುವ ಭ್ರಷ್ಟಾಚಾರ ಮತ್ತು ಕ್ಷೇತ್ರದ ಶಾಸಕರ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಘೋಷಿಸಿದ 57 ಕೆರೆ ತುಂಬಿಸುವ ತುಂಗಭದ್ರಾ ಏತ ನೀರಾವರಿ ಯೋಜನೆ ಕಳೆದ ಐದು ವರ್ಷಗಳಲ್ಲಿ ಕೇವಲ ತುಪ್ಪದಹಳ್ಳಿ ಕೆರೆಗೆ ತಲುಪುವಷ್ಟರಲ್ಲಿ ಸುಸ್ತಾಗಿದೆ.
2021 ರಿಂದ ಡಿಸೆಂಬರ್‍ಗೆ ಕೆರೆ ತುಂಬಿಸುವ ಯೋಜನೆ ಭರ್ತಿಯಾಗಲಿವೆ, 2022ರ ಮಾರ್ಚ್ ಒಳಗೆ ಕೆರೆಗೆ ನೀರು, ಡಿಸೆಂಬರ್‍ಗೆ ಕನಿಷ್ಠ 5 ಕೆರೆಗಳಿಗೆ ನೀರು ಬರುತ್ತದೆ. 2023 ಫೆಬ್ರುವರಿಯಲ್ಲಿ 10 ಕೆರೆಗಳಿಗೆ ನೀರು ಬರುತ್ತದೆ ಎಂದು ಹೇಳಿಕೊಳ್ಳುತ್ತಾ ಕಾಲಹರಣ ಮಾಡಿದ ಶಾಸಕರ ಮತ್ತು ಆಡಳಿತ ವ್ಯವಸ್ಥೆಯ ಲೋಪದ ವಿರುದ್ಧ ಜನರಿಗೆ ಅರಿವು ಮೂಡಿಸುತ್ತಾ ಮತಯಾಚನೆಗೆ ರೆಡಿಯಾಗಿದ್ದಾರೆ.
ಡಬಲ್ ಎಂಜಿನ್ ಸರಕಾರವಿದ್ದರೂ ಏಕೆ ಈ ಯೋಜನೆ ಪೂರ್ಣಗೊಳ್ಳಲಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನಿಸುವ ಮೂಲಕ ಅಭಿವೃದ್ಧಿ ಸೋಲಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದಲ್ಲಿ 1336 ಕೋಟಿ ರೂ ವೆಚ್ಚದ ಅಪ್ಪರ್ `ಭದ್ರಾ ಯೋಜನೆಗೆ ಚುನಾವಣೆ ಘೋಷಣೆಯ ಒಂದು ವಾರ ಮುಂಚೆ ಚಾಲನೆ ನೀಡಲಾಗಿದೆ ಎಂದು ಶಾಸಕರು ಹೇಳುತ್ತಾರೆ. ಆದರೆ ಯಾವೊಬ್ಬ ವಿರೋಧ ಪಕ್ಷದ ನಾಯಕನನ್ನು ಸ್ಥಳಕ್ಕೆ ಕರೆಯದೇ, ಜನರಿಗೂ ತಿಳಿಸದೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದರೆ ಇದು ಜನರ ಮೂಗಿಗೆ ತುಪ್ಪ ಸವರುವ ಕಾರ್ಯ ಸರಿಯಾದ ನೀಲ ನಕ್ಷೆಯಿಲ್ಲದ ಯೋಜನೆಯಿಂದ ಜನರನ್ನು ದಿಕ್ಕು ತಪ್ಪಿಸಲಾಯಿತು.
ನಾನು ಶಾಸಕನಾಗಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರು 57 ಕೆರೆ ನೀರು ತುಂಬಿಸುವ ಯೋಜನೆ ಘೋಷಿಸಿದರು. ಆದರೆ ಇಂದಿನ ಶಾಸಕರು ನನ್ನ ಅವಯಲ್ಲಿ ನೀರು ಬಂತು ಎಂದು ಹೇಳಿಕೊಳ್ಳುತ್ತಿದ್ದಾರೆ. ಪ್ರಬುದ್ಧ ಮತದಾರರಿಗೆ ಎಲ್ಲ ಗೊತ್ತಿದೆ ಎಂದು ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ವಾಗ್ದಾಳಿ ಮಾಡುವ ಮೂಲಕ ಅಭಿವೃದ್ಧಿ ಸೋಲಿನ ಸೂತ್ರವಿಡಿದು ಮತಯಾಚನೆ ಮುಂದುವರೆಸಿದ್ದಾರೆ.
ಇನ್ನು ರಾಜ್ಯ ಸರಕಾರದ 484 ಕೋಟಿ ರೂ ವೆಚ್ಚದ ತುಂಗಭದ್ರಾ ನದಿಯಿಂದ 165 ಗ್ರಾಮಗಳಿಗೆ ನೋರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲನೆ ನೀಡಲಾಗಿದ್ದರೂ ಸಹ ಯೋಜನೆ ಪರಿಪೂರ್ಣವಾಗಲು ಇನ್ನು ಮೂರು ವರ್ಷಗಳಾದರೂ ಬೇಕಾಗುತ್ತದೆ ಎಂಬುದು ಜನರಿಗೆ ತಿಳಿಸುವ ಅಗತ್ಯವಿಲ್ಲ ಎಂಬುದು ಅಭ್ಯರ್ಥಿಗಳ ವಾದ.
ಕ್ಷೇತ್ರದ ಕೆರೆಗಳ ಸ್ವಚ್ಛತೆಗಾಗಿ ಹೂಳೆತ್ತುವ ಕಾರ್ಯದಲ್ಲಿ ಭ್ರಷ್ಟಾಚಾರ, ಗ್ರಾಪಂ 15 ಹಣಕಾಸು ಯೋಜನೆಯಲ್ಲಿ ಭ್ರಷ್ಟಾಚಾರ, ನರೇಗಾ ಯೋಜನೆಯಲ್ಲಿ ಲೋಪ, ಫ್ಲೋರೈಡ್ ನೀರಿನ ಸೇವನೆ.
ಯುಜಿಡಿ ಇಲ್ಲದೇ ಪಟ್ಟಣದ ಗಲೀಜು ನೀರು ಕೆರೆ ಸೇರುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ವ್ಯವಸ್ಥೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾರೋಗ್ಯ, ಇಲಾಖಾವಾರು ಭ್ರಷ್ಟಾಚಾರದಲ್ಲಿ ಜನಪ್ರತಿನಿಯ ಹಸ್ತಕ್ಷೇಪ ಹೀಗೆ ಅಭಿವೃದ್ಧಿ ಕುಂಠಿತದ ಬೆನ್ನು ಹತ್ತಿರುವ ಅಭ್ಯರ್ಥಿಗಳು ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಮೂಲಕ ಮತಯಾಚನೆ ಮಾಡುತ್ತಿರುವುದು ಈ ಬಾರಿ ಚುನಾವಣೆಯ ವಿಶೇಷವಾಗಿದೆ.
ಇನ್ನು ಡಬಲ್ ಎಂಜಿನ್ ಸರಕಾರದ ಶಾಸಕರು ನಮ್ಮ ಸರಕಾರದ 3500 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನೇ ಹಿಡಿದು ಮತ ಪ್ರಚಾರ ಆರಂಭಿಸಿದ್ದು ಮತದಾರರ ಚಿತ್ತ ಯಾವ ಪಕ್ಷದತ್ತ ಎಂಬುದು ಮೇ.13 ರವರೆಗೆ ಕಾಯಬೇಕಿದೆ.
ಎರಡು ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಪೈಪೋಟಿ
ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಿದ್ದರೂ ಸಹ ದಿನದಿಂದ ದಿನಕ್ಕೆ ಸ್ಪರ್ಧೆ ಎರಡು ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಏರ್ಪಡುತ್ತಿದೆ. ಒಂದೇ ಮರದ ರಂಬೆಗಳ ಮಧ್ಯೆ ಮತ ಸ್ಪರ್ಧೆ ದಿನದಿಂದ ದಿನಕ್ಕೆ ಕಾವೇರುತ್ತಿದೆ.