ಸುದ್ದಿವಿಜಯ, ಜಗಳೂರು (ವಿಶೇಷ): ಕ್ಷೇತ್ರದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಕಾಂಗ್ರೆಸ್ ಬೆಂಬಲಿಸುತ್ತಿದ್ದವರು ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದರೆ ಒಂದೇ ಕುಟುಂಬವರು ಮೂರು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಉದ್ಭವಾಗಿದೆ.
ಹೌದು, ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಅವರ ಪುತ್ರ ಡಾ. ರವಿಕುಮಾರ್ ಬಿಜೆಪಿ ಪರ ನಿಂತರೆ,
ಅವರ ಮತ್ತಿಬ್ಬರು ಮಕ್ಕಳು ಪಕ್ಷೇತರ ಅಭ್ಯರ್ಥಿಯಾದ ಎಚ್.ಪಿ ರಾಜೇಶ್ ಪರವಾಗಿದ್ದಾರೆ.
ಹಾಗದರೇ ಗುರುಸಿದ್ದಗೌಡರ ಬ್ಯಾಟಿಂಗ್ ಯಾರ ಪರ ಎಂಬುವುದು ಕುತೂಹಲ ಮೂಡಿಸಿದೆ.
ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟಿ.ಗುರುಸಿದ್ದನಗೌಡರು ಚೆಕ್ ಡ್ಯಾಂ ಸರದಾರರು ಎಂದು ಹೆಸರು ಪಡೆದಿದ್ದಾರೆ. ಇವರು ಮೂಲತಃ ಬಿಜೆಪಿಯಲ್ಲಿದ್ದಾರೆ.
ಆದರೆ ಕೆಲ ವರ್ಷಗಳಿಂದಲೂ ಬಿಜೆಪಿಯ ಸಭೆ, ಸಮಾರಂಭಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದ ಗೌಡರು ಸಾಕಷ್ಟು ಅಭಿಮಾನಿಗಳು, ಕಾರ್ಯಕರ್ತರ ಪಡೆಯನ್ನೇ ಹೊಂದಿದ್ದಾರೆ. ಆದರೂ ಮಕ್ಕಳ ನಡೆಗೆ ಹಲವು ಅನುಮಾನಗಳು ಮೂಡುತ್ತಿವೆ.
ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ವಿ ರಾಮಚಂದ್ರ ಅವರ ಪರವಾಗಿ ಡಾ. ರವಿಕುಮಾರ್ ಪ್ರಚಾರ ನಡೆಸಿ ಸೋಮವಾರ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಿದ್ದರು. ಬುಧವಾರ ಪಕ್ಷೇತರ ಅಭ್ಯರ್ಥಿ ಎಚ್.ಪಿ ರಾಜೇಶ್ ಪರವಾಗಿ ಅರವಿಂದ್, ಪ್ರವೀಣ್ ಭಾಗಿಯಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಅಷ್ಟೇ ಅಲ್ಲ ಅದೇ ಕುಟುಂಬದ ಪ್ರತಿಷ್ಠಿತ ಕಾಲೇಜೊಂದರ ಕಾರ್ಯದರ್ಶಿಯಾಗಿರುವ ಮಧು ಅವರು ಕಾಂಗ್ರೆಸ್ ಅಭ್ಯರ್ಥಿಯಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ಮನೆಯೊಂದು ಬೆಂಬಲ ಮೂರು ಎಂಬಂತಾಗಿದೆ.
ರಾಜಕೀಯ ಚದುರಂಗದಾಟದಲ್ಲಿ ಚಕ್‌ಮೆಟ್ ಯಾವ ಪಕ್ಷದ ಅಭ್ಯರ್ಥಿಗೆ ಎಂಬುದು ಯಕ್ಷಪ್ರಶ್ನೆ ಮತದಾರರಲ್ಲಿ ಮೂಡಿದೆ ಎಂದು ಜನರು ಸಾರ್ವಜನಿಕವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.