ಸುದ್ದಿವಿಜಯ, ಜಗಳೂರು: ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಹಾಗೂ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ತಾಲೂಕು ರೈತ ಸಂಘಟನೆ ತಾಲೂಕು ಕಚೇರಿಯ ಕುವೆಂಪು ಪುತ್ಥಳಿ ಮುಂಭಾಗದ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಸುಮಾರು 54ಸಾವಿರ ಹೆಕ್ಟರ್ ಬಿತ್ತನೆ ಪ್ರದೇಶ ಹೊಂದಿದೆ. ಇದರಲ್ಲಿ ಮೆಕ್ಕೆಜೋಳ, ಶೇಂಗಾ, ಹತ್ತಿ, ರಾಗಿ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿದ್ದು ಇನ್ನೇನು ಬೆಳೆ ಕೈಗೆ ಸಿಗಬೇಕೆನ್ನುವಷ್ಟರಲ್ಲಿ ಅಇಯಾಗಿ ಸುರಿದ ಮೆಳೆಯಿಂದಾಗಿ ಎಲ್ಲಾ ಬೆಳೆಗಳು ಹಾನಿಯಾಗಿ ಲಕ್ಷಾಂತರ ರೂಪಾಯಿಗಳು ನಷ್ಟವಾಗಿದೆ.
ಇದರಿಂದ ರೈತರು ಸಾಲ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಸರ್ಕಾರ ಈ ಕೂಡಲೇ ಹಾನಿಯಾಗಿರುವ ಎಲ್ಲಾ ಬೆಳೆಗಳಿಗೆ ಪರಿಹಾರವನ್ನು ನೀಡಬೇಕು ಎಂದು ರೈತರು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ಈ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪರಿಹಾರವಿರುತ್ತದೆ, ಅದರಲ್ಲೂ ಉದ್ದಿಮೆದಾರರು ಕೋಟ್ಯಾಂತರ ರೂಪಾಯಿ ಸಾಲವನ್ನು ಕೂಡ ಕೇಂದ್ರ ಸರ್ಕಾರ ಮನ್ನಾ ಮಾಡಿದೆ.
ಆದರೆ ದುರಂತವೆಂದರೆ ಅನ್ನ ಕೊಡುವ ರೈತ ಮಾಡಿದ ಸಾಲವನ್ನು ಮನ್ನಾ ಮಾಡಿ ಎಂದರೆ ಸೊಪ್ಪು ಹಾಕುವುದಿಲ್ಲ, ಕನಿಷ್ಠ ಪರಿಹಾರದ ಹಣವನ್ನಾದರೂ ನೀಡುತ್ತಿಲ್ಲ ಇಂತಹ ರೈತ ವಿರೋಧಿ ಸರ್ಕಾರಗಳ ವಿರುದ್ದ ದಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಈರುಳ್ಳಿ ಬೆಳೆ ಮಳೆಗೆ ಕೊಚ್ಚಿ ಹೋಗಿದೆ. ಕೆಲವು ಕಡೆ ಕೊಳೆತು ಹೋಗಿದೆ. ಬೀಜ, ಗೊಬ್ಬರಕ್ಕೆ ಮಾಡಿದ ಸಾಲ ಮೈ ಮೇಲೆ ಬಂದಿದೆ. ಇತ್ತ ಬೆಳೆ ಇಲ್ಲದೇ, ಅತ್ತ ಸಾಲ ತೀರಿಸಲು ಸಾಲದೇ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ರೈತರಲು ತಲುಪಿದ್ದಾರೆ ಆದರೂ ಸರ್ಕಾರ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು ಮಾತನಾಡಿ, ಸರ್ಕಾರ ಎಲ್ಲವನ್ನು ಖಾಸಗೀಕರಣ ಮಾಡುತ್ತಾ ಕೇವಲ ಆದಾಯವನ್ನು ಎದುರು ನೋಡುತ್ತಿದೆ ಆದರೆ ಬಿಸಿಲು, ಮಳೆಯಲ್ಲಿ ನಲುಗುತ್ತಿರುವ ರೈತರ ನೋವು ಕಾಣಿಸುವುದಿಲ್ಲ.
ಈ ವರ್ಷ ಸುರಿದ ಬಾರಿ ಮಳೆಗೆ ಸಾಕಷ್ಟು ಬೆಳೆಗಳು ಹಾನಿಯಾಗಿವೆ. ರೈತರ ಬರೀಗೈಯಲ್ಲಿ ಕೂತಿದ್ದಾರೆ ಸರ್ಕಾರ ಕೂಡಲೇ ಸಾಲ ಮನ್ನಾ ಮಾಡಬೇಕು, ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಂಜೆ ನಾಲ್ಕು ಗಂಟೆಗೆ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ರೈತರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ತಾಲೂಕಾಧ್ಯಕ್ಷ ಪಿ. ಗಂಗಾಧರಪ್ಪ, ಗೌರವಾಧ್ಯಕ್ಷ ಚಿಕ್ಕಬನ್ನಿಹಟ್ಟಿ ವೀರೇಶ್, ಮುಖಂಡರಾದ ಪ್ರಹ್ಲಾದ್, ಸಹದೇವರೆಡ್ಡಿ, ರ‍್ಲಕಟ್ಟೆ ಕೆಂಚಪ್ಪ, ಎಂ. ಶರಣಪ್ಪ ಸೇರಿದಂತೆ ಮತ್ತಿತರಿದ್ದರು.