Suddivijaya|Kannada News|22-04-2023
ಸುದ್ದಿವಿಜಯ,ಜಗಳೂರು.20 ವರ್ಷಗಳಿಂದ ವಾಸವಿರುವ ಮನೆಗಳಿಗೆ ಹಕ್ಕು ಪತ್ರ ನೀಡದಿರುವುದು ಹಾಗೂ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೇ ನಿರ್ಲಕ್ಷ ತೋರಿದ ತಾಲೂಕು ಆಡಳಿತದ ವಿರುದ್ದ ಆಕ್ರೋಶಗೊಂಡ ಗೌರಿಪುರ ಹೊಸೂರಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.
ಜಗಳೂರು ತಾಲೂಕು ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಪುರ ಹೊಸೂರು ನೂರಾರು ದಲಿತ ಕುಟುಂಬಗಳಿದ್ದು, ಸುಮಾರು 300ಕ್ಕೂ ಹೆಚ್ಚು ಮತದಾರರಿದ್ದಾರೆ. ಇಲ್ಲಿನ ಬದುಕುತ್ತಿರುವ ಪ್ರತಿ ಕುಟುಂಬಗಳು ಕೂಲಿ ಕೆಲಸಗಾರರು. ನಿತ್ಯ ದುಡಿದ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಗಳಾಗಲೀ ಅಥವಾ ಶಾಸಕರಾಗಲಿ ಒಮ್ಮೆಯೂ ನಮ್ಮೂರಿಗೆ ಭೇಟಿ ನೀಡಿ ಜನರ ಸಮಸ್ಯೆ ಕೇಳಿಲ್ಲ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಆದರೆ ಚುನಾವಣೆಯಲ್ಲಿ ಮಾತ್ರ ಮತ ಬೇಕು ಎಂದು ಮನೆ ಬಾಗಿಲಿಗೆ ಬರುತ್ತಾರೆ. ಸರಿಯಾದ ರಸ್ತೆಗಳಿಲ್ಲ. ವಿದ್ಯುತ್ ದೀಪಗಳಿಲ್ಲ. ಕಾಡು ಜನರಂತೆ ಬದುಕುವಂತಾಗಿದೆ ಎಂದು ಮಹಿಳೆಯರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.
2002-03ನೇ ಸಾಲಿನಲ್ಲಿ ಸರ್ಕಾರದಿಂದ 75 ಅಶ್ರಯ ಮನೆಗಳು ಗುಂಪು ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈವರೆಗೂ ಹಕ್ಕು ಪತ್ರಗಳನ್ನು ನೀಡಲ್ಲ. ಬಹುತೇಕ ಕುಟುಂಬಗಳಿಗೆ ನಿವೇಶನವಿಲ್ಲದೇ ಸಣ್ಣ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ಮತದಾನ ಬಹಿಷ್ಕರಿಸಲು ತೀರ್ಮಾನ ಮಾಡಲಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೋರಾಟಗಾರ ಮೈಲೇಶ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಸತೀಶ್, ನರೇಶ್, ಹನುಮಂತರಾಜ್, ಪಾಪಮ್ಮ, ಲೋಕಪ್ಪ, ಬಸವರಾಜಪ್ಪ, ಶಿವಣ್ಣ, ಅಜಯ್ಯ, ಪಾಲಮ್ಮ, ನಿರಂಜನ್, ಹನುಮಂತಪ್ಪ, ನಾಗರಾಜ್ ಸೇರಿದಂತೆ ಮತ್ತಿತರಿದ್ದರು.