ಸುದ್ದಿವಿಜಯ, ಜಗಳೂರು: ಓದಿನ ಮಧ್ಯೆ ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಮೈಗೂಡಿಸಿಕೊಳ್ಳದಿದ್ದರೆ ವಿದ್ಯಾರ್ಥಿಗಳ ಭೌದ್ಧಿಕತೆ ಎಂಬ ಬೇರಿಗೆ ರೋಗ ಬರುತ್ತದೆ ಎಂದು ಬಂಡಾಯ ಸಾಹಿತಿ ಹಾಗೂ ಚಳ್ಳಕೆರೆ ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 2033-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾ.ಸೇ.ಯೋ, ಯುವರೆಡ್ ಕ್ರಾಸ್, ರೋವರ್ಸ್-ರೆಂಜರ್ಸ್ ಸೇರಿ ವಿವಿಧ ಸಮಿತಿಗಳ ಉದ್ಘಾಟನೆ ಹಾಗೂ ಪ್ರಥಮ ಬಿಎ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ನಮ್ಮದು. ಅದು ಅವಕಾಶಗಳ ಮಹಾಪೂರವನ್ನೇ ಹರಿಸಲಿದೆ. 5ನೇ ತರಗತಿವರೆಗೆ ಮಕ್ಕಳು ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದಿದೆ.
ರಸಋಷಿ ಕುವೆಂಪು ಹೇಳಿದ್ದು ಅದನ್ನೇ. ‘ಭಾರಿಸು ಕನ್ನಡ ಡಿಂಡಿಮ’ ಎಂದು ಹೇಳುವ ಮೂಲಕ ಅದು ಕೇವಲ ಮಂತ್ರವಲ್ಲ, ಅದೊಂದು ಶಕ್ತಿ ಎಂದು ವ್ಯಾಖ್ಯಾನಿಸಿದರು. ಮಾತೃ ಭಾಷೆಯಾದ ಕನ್ನಡವನ್ನು ಎಲ್ಲಕಡೆ ಬೆಳಸಬೇಕಾದರೆ ಅದನ್ನು ಪ್ರತಿಯೊಬ್ಬರು ಪ್ರತಿನಿತ್ಯ ಎಲ್ಲ ಸ್ಥರಗಳಲ್ಲೂ ಬಳಸಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿ, ಇಂಗ್ಲಿಷ್ನಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲೇ ಬರೆಯಲು ಕೇಳಿಕೊಳ್ಳಿ ಎಂದು ಹೇಳಿದರು.
ಮಣಿಪುರದ ಸಂಘರ್ಷ, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಮಧ್ಯೆ ಯುದ್ಧ ಜಗತ್ತಿನ ಅಸಹ್ಯ ಪಡುವ ಸಂಗತಿಗಳು. ನೈಜಗಳನ್ನು ಅರಿಯದೇ ಗೊಂದಲ ಮೂಡಿಸುವ ಸಮಾಜ ಘಾತುಕರನ್ನು ತಡೆಯುವ ಶಕ್ತಿ ವಿದ್ಯಾರ್ಥಿಗಳಿಗಿರಬೇಕು ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಹುಟ್ಟಿದ ಮನುಷ್ಯ ಸಾಧನೆ ಮಾಡಿ ಸಾಯಬೇಕು. ಇತಿಹಾಸದ ಪುಟಗಳಲ್ಲಿ ಸೇರುವಂತೆ ಬೆಳೆಯಬೇಕು. ಸನ್ಮಾರ್ಗ, ಶಿಕ್ಷಣ ಅಗತ್ಯವನ್ನು ವಿದ್ಯಾರ್ಥಿಗಳು ಅರಿಯಬೇಕು. ಶಿಕ್ಷಣದಲ್ಲಿ ವೈಚಾರಿಕತೆ ಇರಲಿ, ಮೌಢ್ಯತೆ ತೊಲಗಿಸಿ.
ಕಾಲೇಜಿಗೆ ಬೇಕಾಗುವ ಮೂಲ ಸೌರ್ಕಗಳ ಜೊತೆಗೆ ಕಾಂಪೌಂಡ್, ಆಡಿಟೋರಿಯಂ ಮತ್ತು ಬಸ್ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ರಾಜೇಶ್ವರಿ ಪೂಜಾರ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಕೆಪಿಸಿಸಿ ಸದಸ್ಯ ಕಲ್ಲೇಶ್ರಾಜ್ ಪಾಟೀಲ್, ಸಿಡಿಸಿ ಸದಸ್ಯರಾದ ತೋರಣಗಟ್ಟೆ ಜೀವಣ್ಣ, ಲೋಕೇಶ್ ಎಂ.ಐಹೋಳೆ, ಮೋಹನ್, ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ, ಓಮಣ್ಣ, ತಿಪ್ಪೇಸ್ವಾಮಿ, ಲೋಕೇಶ್, ಉಪನ್ಯಾಸಕ ಬಸವರಾಜ್, ಸತೀಶ್, ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್, ಉಪನ್ಯಾಸ ಮಹೇಶ್ ಸೇರಿದಂತೆ ಅನೇಕರು ಇದ್ದರು.