ಸಂಸ್ಕಾರಯುತ ಶಿಕ್ಷಣ ವಿದ್ಯಾರ್ಥಿಗಳಿಗೆ ಭೂಷಣ: ಶಾಸಕ ಬಿ.ದೇವೇಂದ್ರಪ್ಪ

Suddivijaya
Suddivijaya June 24, 2023
Updated 2023/06/24 at 11:21 AM

ಸುದ್ದಿವಿಜಯ, ಜಗಳೂರು: ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪದ ಮೂಲ ಹಾಲು. ವಿನಯ, ಗೌರವ, ಹಣ, ಸಂಪತ್ತು, ಮನ ಶಾಂತಿ ಎಲ್ಲವೂ ಶಿಕ್ಷಣದ ಮೂಲ. ಸಂಸ್ಕಾರಯುತ ಶಿಕ್ಷಣವೇ ವಿದ್ಯಾರ್ಥಿಗಳಿಗೆ ಭೂಷಣ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶನಿವಾರ 2022-23ನೇ ಸಾಲಿನ  ಸಾಂಸ್ಕøತಿಕ, ಕ್ರೀಡಾ, ರಾ.ಸೇ. ಯೋಜನೆ, ಯುವ ರೆಡ್ ಕ್ರಾಸ್ , ರೋವರ್ಸ್, ಐಕ್ಯೂಎಸಿ ಸಮಿತಿಗಳ ಸಮಾರೋಪ ಹಾಗೂ ತೃತೀಯ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಾಲಿಗೆ ಸಂಸ್ಕಾರ ಕೊಟ್ಟಂತೆಲ್ಲಾ ಮೊಸರು, ಮಜ್ಜಿಗೆ ಬೆಣ್ಣೆ ತುಪ್ಪ ಹೇಗೆ ಉಪ ಉತ್ಪನ್ನಗಳು ಉಂಟಾಗುತ್ತವೆಯೋ ಹಾಗೇಯೆ ಗುರುಗಳು ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಕೊಟ್ಟಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಯ ಜೀವನ ಸುಂದರವಾಗಿರುತ್ತದೆ ಅದನ್ನು ಆಳು ಮಾಡಿಕೊಳ್ಳದೇ ಸದುಪಯೋಪಡಿಸಿಕೊಂಡು ಪಾಲಕರಿಗೆ ಗೌರವ ತಂದು ಕೊಡಬೇಕು ಎಂದು ಸಲಹೆ ನೀಡಿದರು.

ಪ್ರತಿಭೆ ಗುಡಿಸಲಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯುತ್ತದೆ. ಜನ್ಮ ಕೊಟ್ಟ ತಾಯಿ, ಭೂಮಿಗೆ  ಋಣ ತೀರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮನುಷ್ಯರಾಗಿ ಬದುಕಿ ಮತ್ತೊಬ್ಬರಿಗೆ ಬದುಕಲು ಬಿಡೋಣ ಎಂದರು.

ಚಿತ್ರದುರ್ಗ ಸರಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಗಿ  ಮಾತನಾಡಿ, ಶಿಕ್ಷಣ ಎನ್ನುವುದು ಕೌಶಲ್ಯ ಬೆಳೆಸುವ ಶಿಕ್ಷಣವಾಗಬೇಕಿದೆ. ಶಿಕ್ಷಣ ಜ್ಞಾನವನ್ನು ನೀಡಿದರೆ, ಕೌಶಲ್ಯ ಬದುಕನ್ನು ಕಟ್ಟಿಕೊಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕರೋನ ದೊಡ್ಡ ಆತಂಕವನ್ನುಂಟು ಮಾಡಿತ್ತು.

ಇದರಿಂದ ನಮ್ಮೊಳಗಿನ ಕೌಶಲ್ಯ ಕುಂದಿತು, ಆ ಕಾಲಘಟ್ಟದಲ್ಲಿ ಬರೆಯಲು, ಓದಲು ಒಲವು ಇರಲಿಲ್ಲ ಎಂದರು.
ಕಾಲ ಬದಲಾವಣೆ ಅಲ್ಲ ವ್ಯಕ್ತಿತ್ವ, ಸ್ವಭಾವಗಳು ಬದಲಾಗಬೇಕು. ವಿಜ್ಞಾನ, ತಂತ್ರಜ್ಞಾನ, ಕಾಲದಲ್ಲಿ ಜಗತ್ತು ಅಭಿವೃದ್ದಿಯಾಗುತ್ತಿದೆ ಆದರೆ  ಜಾಗತೀಕರಣದ ನೆಪದಲ್ಲಿ ಜಗತ್ತು ಚಿಕ್ಕದಾಗುತ್ತಿದೆ ಎಂದರು.

ಮೋಬೈಲ್  ಜ್ಞಾನವನ್ನು ಕಿತ್ತುಕೊಳ್ಳುತ್ತಿದೆ. ಸಂಬಂಧ ದೂರ ಮಾಡುತ್ತಿದೆ. ಓದಿನಲ್ಲಿರುವ ಸುಖವನ್ನು ಕಳೆದುಕೊಂಡಿದ್ದೇವೆ. ನಿರಂತರವಾಗಿ ಓದಿದರೆ ಜ್ಞಾನ ಕೌಶಲ್ಯ ಬೆಳೆಯುತ್ತದೆ.

ಓದು, ಕಥೆ ಬದುಕಿಗೆ ಆದರ್ಶ ಮೌಲ್ಯವಾಗಬೇಕು, ಬುದ್ದ, ಬಸವ, ಅಂಬೇಡ್ಕರ್, ಗಾಂಧೀಜಿ ಬಗ್ಗೆ ಪ್ರೀತಿ ಸಾರುವುದನ್ನು ಓದಬೇಕು. ಮಾನವೀಯತೆ ಕಣ್ಮರೆಯಾಗುತ್ತಿದೆ ಯುವಕರು ಜಾಗೃತರಾಗಬೇಕು ಎಂದರು.

ಸಿಪಿಐ ಶ್ರಿನಿವಾಸ್ ರಾವ್ ಮಾತನಾಡಿ, ವ್ಯಕ್ತಿ ಉನ್ನತ ಹುದ್ದೆಯನ್ನು ಅಲಂಕರಿಸಲು ವಿಧ್ಯೆ ಮತ್ತು ವಿನಯತೆ ತುಂಬ ಮುಖ್ಯವಾಗಿದೆ. ಶಿಕ್ಷಣದಿಂದಲೇ ಏನಾದರೂ ಸಾಧಿಸಲು ಸಾಧ್ಯ ಎಂದರು.

ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ  ವ್ಯಾಟ್ಸಪ್ ಯುನಿವರ್ಸಿಟಿಗಳ ಹಾವಳಿ ಹೆಚ್ಚಾಗಿದೆ ಅದರಿಂದ ದೂರವಿದ್ದು, ಶಿಕ್ಷಣ ಮತ್ತು ಸಾಮಾನ್ಯ ಜ್ಞಾನ ಪಡೆದುಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ವರಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ  ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಸಿ.ತಿಪ್ಪೇಸ್ವಾಮಿ, ಪ್ರಶಾಂತ್, ಲೋಕೇಶ್.ಎಂ, ಶ್ವೇತಾ ಮಧುಕುಮಾರ್, ಖಲಂದರ್, ಜಯಶೀಲ ರೆಡ್ಡಿ, ಪ್ಯಾರೇಜಾನ್, ಷಂಷುದ್ದೀನ್,

ವೀರಣ್ಣ, ಹಟ್ಟಿ ತಿಪ್ಪೇಸ್ವಾಮಿ, ಸಾವಿತ್ರಮ್ಮ, ಎಸ್. ಲೋಕೇಶ್, ಸರಕರಿ ಪಿಯು ಕಾಲೇಜಿನ ಪ್ರಾಂಶುಪಾಲ ಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್,  ಮುಖಂಡ ಹೋಮಣ್ಣ, ಬಸವರಾಜ್, ಡಾ. ಶಿವಕುಮಾರ್,ಸಣ್ಣ ಸೂರಯ್ಯ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!