ಸುದ್ದಿವಿಜಯ, ಜಗಳೂರು: ತಾಲೂಕಿನ ಬಿಳಿಚೋಡು ಹೋಬಳಿಯ ಗ್ರಾಪಂ ಮತ್ತು ಗ್ರಾಮೀಣ ಭಾಗದ ತೋಟಗಾರಿಕಾ ಬೆಳೆಗಳ ರೈತರಿಗೆ ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಭವಿಸುವ ಹಾನಿಗಳ ಬಗ್ಗೆ ಸಹಾಯಕ ತೋಟಗಾರಿಕಾ ಅಧಿಕಾರಿ ವೆಂಟಕೇಶ್ವರ ನಾಯ್ಕ್ ಮಂಗಳವಾರ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗುವ ವಿಮೆಗಳ ಬಗ್ಗೆ ಮಾಹಿತಿ ತಿಳಿಸಿದರು. ತಾಲೂಕಿನ ವಿವಿಧ 3 ತೋಟಗಾರಿಕಾ ಬೆಳೆಗಳಿಗೆ 2023-24 ನೇ ಸಾಲಿನ ಮರು ವಿನ್ಯಾಸಗೊಳಿಸಿದ ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಘೋಷಣೆಯಾಗಿದ್ದು, ತೋಟಗಾರಿಕಾ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ದಾವಣಗೆರೆ ತಾಲ್ಲೂಕಿನಲ್ಲಿ ಅಡಿಕೆ, ದಾಳಿಂಬೆ ಮತ್ತು ವೀಳ್ಯದೆಲೆ ಬೆಳೆಯುವ ಬೆಳೆಗಾರರು ನಿಗಧಿತ ವಿಮಾ ಮೊತ್ತ ತುಂಬಿ ಯೋಜನೆಯ ಉಪಯೋಗಪಡೆಯಬಹುದಾಗಿದೆ. ಪ್ರಕೃತಿ ವಿಕೋಪಗಳಾದ ಅತಿವೃಷ್ಶಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗಬಹುದಾದ ಬೆಂಕಿ ಅವಘಡಗಳಿಗೆ ಉಂಟಾಗುವ ಬೆಳೆಹಾನಿಯ ನಷ್ಟದ ಪರಿಹಾರವನ್ನು ಆಯಾ ಪ್ರಾಂತ್ಯವಾರು ನಿರ್ಧರಿಸಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಬೆಳೆವಿಮೆ ಯೋಜನೆಯನ್ನು ಸರಳಗೊಳಿಸಿ ಮತ್ತು ರೈತರಿಗೆ ಸುಲಭ ದರದಲ್ಲಿ ಪ್ರೀಮಿಯಂ ಹಾಗೂ ಉತ್ತಮ ಸೇವೆಯನ್ನು ಒದಗಿಸಲು ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಅಡಿಕೆಗೆ ಪ್ರತಿ ಹೆಕ್ಟೇರ್ ಗೆ 6400 ರೂ, ದಾಳಿಂಬೆ 6350 ರೂ ಹಾಗೂ ವೀಳ್ಯದೆಲೆಗೆ 5850 ರೂ ವಿಮಾ ಕಂತು ನಿಗಧಿಪಡಿಸಲಾಗಿದೆ.
ಹೀಗೆ ಪಾವತಿಸಿದ ರೈತರ ಬೆಳೆ ಪ್ರಾಕೃತಿಕ ನಷ್ಟಕ್ಕೆ ಸಿಲುಕಿ ನಾಶವಾದರೆ ಅಡಿಕೆಗೆ 1.28 ಲಕ್ಷ, ದಾಳಿಂಬೆಗೆ 1.27 ಲಕ್ಷ ಮತ್ತು ವೀಳ್ಯೆದೆಲೆಗೆ 1.17 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ.
ವಿಮೆ ತುಂಬಲು ಇದೇ ಜುಲೈ 15 ಕಡೆಯ ದಿನವಾಗಿದ್ದು, ಆಸಕ್ತ ತೋಟಗಾರಿಕಾ ಬೆಳೆಗಾರರು ಕೂಡಲೇ ಸಮೀಪದ ಬ್ಯಾಂಕ್ ಶಾಖೆ, ಗ್ರಾಮ ಪಂಚಾಯತಿ ಕಚೇರಿ, ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕಾ ಇಲಾಖೆ ಕಚೇರಿ ಸಂಪರ್ಕಿಸಬಹುದು ಎಂದು ವೆಂಕಟೇಶ್ವರ ನಾಯ್ಕ್ ಮನವಿ ಮಾಡಿದ್ದಾರೆ.
ಬೀಳಿಚೋಡು ಹೋಬಳಿ ವ್ಯಾಪ್ತಿಗೆ ಬರುವ ಬಿಳಿಚೋಡು, ಮೆದಗಿನಕೆರೆ, ಗುತ್ತಿದುರ್ಗ, ದೇವಿಕೆರೆ, ಹಾಲೇಕಲ್ಲು, ಪಲ್ಲಾಗಟ್ಟೆ, ದಿದ್ದಿಗೆ ಗ್ರಾಪಂಗಳಿಗೆ ಭೇಟಿ ನೀಡಿ ಅವರು ರೈತರೊಂದಿಗೆ ಸಂವಾದ ನಡೆಸಿ ವಿಮೆ ಕಂತಿನ ಬಗ್ಗೆ ಪೂರಕ ಮಾಹಿತಿ ನೀಡಿದರು. ರೈತರು ಮಾಹಿತಿ ಪಡೆದು ಬೆಳೆ ವಿಮೆ ತುಂಬಲು ಉತ್ಸುಕರಾದರು.