ಸುದ್ದಿವಿಜಯ, ಜಗಳೂರು: ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಗಳೂರು ತಾಲೂಕನದನು ಹಸೀಕರಣಗೊಳಿಸಿ ಮಲೆನಾಡನ್ನಾಗಿಸಿ ರೈತರು ಆರ್ಥಿಕವಾಗಿ ಸ್ಥಿತಿವಂತರನ್ನಾಗಿಸಲು ಹಗಲಿರುಳು ಶ್ರಮಿಸುವೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ತಾಲೂಕು ಆಡಳಿತ, ತಪಂ, ಪಪಂ ವತಿಯಿಂದ ಸೋಮವಾರ ಪಟ್ಟಣದ ಬಯಲು ರಂಗಮಂದಿರ ಮೈದಾನದಲ್ಲಿ ’75ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಲು ಮಹಾತ್ಮಾಗಾಂಧಿ ಸೇರಿದಂತೆ ಲಕ್ಷಾಂತರ ಮಂದಿ ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ತಾಲೂಕಿನಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದವರಲ್ಲಿ 13 ಜನ ಹೋರಾಟಗಾರರಿದ್ದಾರೆ.
ಅದರಲ್ಲಿ ತೋರಣಗಟ್ಟೆ ದೇವರ ಸಂಜೀವಪ್ಪ, ಅಂಗಡಿ ಕೃಷ್ಣಪ್ಪ, ಭಾಸ್ಕರ್ ತಿಮ್ಮಪ್ಪ, ಅಂಜಿನಪ್ಪ, ತಿಮ್ಮಾರೆಡ್ಡಿ, ಕಲ್ಲನಗೌಡರು, ಬಿಳಿಚೋಡು ಗುಂಡಾಜೋಯಿಸರು ಸೆರೆವಾಸ ಅನುಭವಿಸಿದ್ದಾರೆ. ಅವರನ್ನು ಈವೇಳೆ ಸ್ಮರಸಲೇ ಬೇಕು ಎಂದರು.
ಜಗಳೂರು ಅಂದ ತಕ್ಷಣವೇ ಬರದ ತಾಲೂಕು ಎಂದೇ ಹೆಸರಾಗಿದೆ. ಆದರೆ ಬಿಜೆಪಿ ಸರಕಾರ ಬಂದ ನಂತರ 57 ಕೆರೆಗಳಿಗೆ ನೀರು ತರುವ ಯೋಜನೆ ಯಶಸ್ವಿಯಾಗಿ ನೆರವೇರುತ್ತಿದೆ.
ಡಿಸೆಂಬರ್ ಒಳಗೆ 57 ಕೆರೆಗಳಿಗೂ ನೀರು ತುಂಬಿಸುತ್ತೇವೆ. ಇದಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಸ್ತುತ ಸಿಎಂ ವಸವರಾಜ್ ಬೊಮ್ಮಾಯಿ ಅವರೇ ಕಾರಣ. ತರಳಬಾಳು ಶ್ರೀಗಳ ನೇತೃತ್ವದಲ್ಲಿ ಕೆರೆ ತುಂಬಿಸುವ ಏತನೀರಾವರಿ ಯೋಜನೆಯಿಂದ ತಾಲೂಕು ಹಸಿರು ನಾಡಾಗುತ್ತಿದೆ.
1336 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ, ಬರುವ ದಸರಾ ಆಯುಧ ಪೂಜೆಯ ದಿನ ಕಾಮಗಾರಿ ಆರಂಭಕ್ಕೆ ಪೂಜೆ ನೆರವೇರಿಸಲಾಗುವುದು ಎಂದರು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯಬರಲು ಸಹಸ್ರಾರು ಮಹಾನ್ ವ್ಯಕ್ತಿಗಳ ರಕ್ತ ತರ್ಪಣವಾಗಿದೆ. ಮಾಡು ಇಲ್ಲವೇ ಮಡಿ ಎಂಬ ಪ್ರೇರಣಾ ವಾಖ್ಯದಿಂದದೇಶದ ಉದ್ದಗಲಕ್ಕೂ ಹೋರಾಟಗಳು ನಡೆದವು. ಈ ವೇಳೆ ಸಾವಿರಾರು ಜನರ ಪ್ರಾಣತೆತ್ತರು.
ತ್ಯಾಗ ಬಲಿದಾನಗಳಿಂದ ದೇಶ ಸ್ವಾತಂತ್ರವಾಯಿತು. 75 ವರ್ಷ ಈ ಸುಸಂದರ್ಭದಲ್ಲಿ ಎಲ್ಲರ ಮನೆಗಳ ಮೇಲೂ ತಿರಂಗ ಧ್ವಜ ಹಾರಿಸಿದ್ದು ಐಕ್ಯತೆಯ ಸಂದೇಶವಾಗಿದೆ. ಜಗಳೂರು ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ 13ಜನ ಮಹಾನ್ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅದರಲ್ಲಿ ಚಿಕ್ಕಮಲ್ಲನಹೊಳೆ ಗ್ರಾಮದ ಚಂದ್ರಣ್ಣರೆಡ್ಡಿ ಅವರನ್ನು ತಾಲೂಕು ಆಡಳಿತ ಸನ್ಮಾನಿಸಿ ಗೌರವಿಸಿದೆ ಎಂದರು.
ಈ ವೇಳೆ ಶೈಕ್ಷಣಿಕವಾಗಿ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಸಕರು ಲ್ಯಾಪ್‍ಟಾಪ್ ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಸ್ನಾತಕೋತ್ತರ ಪದವಿಯಲ್ಲಿ ಬಂಗಾರ ಪದಕಗಳಿಸಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಅಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪಪಂ ಅಧ್ಯಕ್ಷರಾದ ಸಿ.ವಿಶಾಲಾಕ್ಷಿ, ಉಪಾಧ್ಯಕ್ಷರಾದ ಎ.ನಿರ್ಮಲಕುಮಾರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ, ಪಪಂ ಚೀಫ್ ಆಪೀಸರ್, ಲೋಕ್ಯನಾಯ್ಕ, ಬಿಇಒ ಉಮಾದೇವಿ, ಸುಜಾತಮ್ಮ, ಓಂಕಾರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಗಳೂರು ಪಟ್ಟಣದ ಜೆಎಂ ಇಮಾಂ ಶಾಲೆ, ಬಾಲಭಾರತಿ, ಅಮರಭಾರತಿ, ಎನ್‍ಎಂಕೆ, ಸರಕಾರಿ ಪದವಿಪೂರ್ವ ಕಾಲೇಜು, ಸರಕಾರಿ ಹೈಸ್ಕೂಲ್, ಆರ್‍ವಿಎಸ್ ಶಾಲೆ, ಬೇಡರಕಣ್ಣಪ್ಪ ಶಾಲೆ, ಹೊರಕೆರೆ ಸರಕಾರಿ ಶಾಲೆ ಸೇರಿದಂತೆ ಅನೇಕ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿಸಿಕೊಟ್ಟರು.