ಜಗಳೂರು: ಇಂದಿರಾ ಗಾಂಧಿ ಪುಣ್ಯಸ್ಮರಣೆ, ಗರ್ಭಿಣಿಯರಿಗೆ ಪ್ರತಿದಿನ ಉಚಿತ ಗಂಜಿ ವಿತರಣೆಗೆ ಚಾಲನೆ

Suddivijaya
Suddivijaya October 31, 2023
Updated 2023/10/31 at 1:10 PM

ಸುದ್ದಿವಿಜಯ, ಜಗಳೂರು: ದೇಶದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 39ನೇ ಪುಣ್ಯಸ್ಮರಣೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಅಂಗವಾಗಿ ಮಂಗಳವಾರ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಪ್ರತಿದಿನ ಉಚಿತ ಗಂಜಿ ಮತ್ತು ಬಿಸಿನೀರು ವ್ಯವಸ್ಥೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಾನು ನಾಲಂದ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ ದಿನದಂದೇ ಇಂದಿರಾ ಗಾಂಧಿ ಹತ್ಯೆಯಾಯಿತು. ಅವರ ಹತ್ಯೆಯಾಗಿ ಇಂದಿಗೆ 39 ವರ್ಷಗಳು ಕಳೆದವು. ತೊಟ್ಡಿಲು ತೂಗುವ ಕೈ ಜಗತ್ತನ್ನು ಆಳುತ್ತದೆ ಎಂಬುದಕ್ಕೆ ಇಂದಿರಾಗಾಂಧಿ ಅವರೇ ಸಾಕ್ಷಿ.

  ಜಗಳೂರು ಪಟ್ಟಣದ ಶಾಸಕರ ಜನ ಸಂಪರ್ಕಕಚೇರಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಉಚಿತ ಗಂಜಿ ಮತ್ತು ಬಿಸಿನೀರು ವ್ಯವಸ್ಥೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.
  ಜಗಳೂರು ಪಟ್ಟಣದ ಶಾಸಕರ ಜನ ಸಂಪರ್ಕಕಚೇರಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಉಚಿತ ಗಂಜಿ ಮತ್ತು ಬಿಸಿನೀರು ವ್ಯವಸ್ಥೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.

1975 ಜೂನ್ 25 ರಂದು ತುರ್ತು ಪರಿಸ್ಥಿತಿ ಹೇರಲಾಯಿತು. ಆ ಸಂದರ್ಭದಲ್ಲಿ ಅವರು ತೆಗೆದುಕೊಂಡ ದಿಟ್ಟ ಕ್ರಮಗಳು ಅವರ ಧೀರತನಕ್ಕೆ ಸಾಕ್ಷಿ..

ಅವರ ಆಡಳಿತ ಅವಧಿಯಲ್ಲಿ ಅಂಚೆಕಚೇರಿ, ಉಳುವವನೇ ಭೂ ಒಡೆಯ, ಬ್ಯಾಂಕುಗಳ ರಾಷ್ಟ್ರೀಕರಣ ಹೀಗೆ ಅನೇಕ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಭಾರತವನ್ನು ಸದೃಢವಾಗಿ ದೇಶವನ್ನಾಗಿ ಕಟ್ಟುವಲ್ಲಿ ಅವರ ಶ್ರಮ ಅಪಾರವಾದುದು.

ಆದರೆ ಈಗಿನ ಕೇಂದ್ರದ ಎನ್‍ಡಿಎ ಸರಕಾರ ಕಾಂಗ್ರೆಸ್ ಮಾಡಿದ ಶಾಶ್ವತ ಕೆಲಸಗಳಿಗೆ ಸುಣ್ಣ ಬಣ್ಣ ಬಳಿದು ನಾವು ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಇಂದಿರಾ ಗಾಂಧಿ ಎಷ್ಟೇ ಶ್ರೀಮಂತರಾಗಿದ್ದರೂ ಬಡವರ ಪರ ಧ್ವನಿ ಎತ್ತಿದ ಧೀಮಂತ ಉಕ್ಕಿನ ಮಹಿಳೆಯಾಗಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬ ಅವರದ್ದು ಎಂದು ಸ್ಮರಿಸಿದರು.

ಕಾಂಗ್ರೆಸ್‍ನಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂತು. ಕಾಂಗ್ರೆಸ್ ಪಕ್ಷದಿಂದಲೇ ದೇಶ ಸುಭದ್ರವಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್, ‘ನಾನು ಮಲಗಲ್ಲ, ವ್ಯವಸ್ಥೆಯನ್ನು ಮಲಗಲು ಬಿಡಲ್ಲ’ ಎಂದು ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲೂ ಅಷ್ಟೇ ನನ್ನ ಐದು ವರ್ಷದ ಅವಧಿಯಲ್ಲಿ ಅಧಿಕಾರಿಗಳನ್ನು ಎಚ್ಚರಿಸದೇ ಬಿಡುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಸಿ.ತಿಪ್ಪೇಸ್ವಾಮಿ, ಎ.ಪಿ.ಪಾಲಯ್ಯ, ಬಿ.ಮಹೇಶ್ವರಪ್ಪ, ರಮೇಶ್ ರೆಡ್ಡಿ, ವೈದ್ಯಾಧಿಕಾರಿ ಡಾ.ಷಣ್ಮುಖ, ತಮಲೇಹಳ್ಳಿ ಗುರುಮುರ್ತಿ, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಅನೇಕರು ಇದ್ದರು.

ಇನ್ನುಮುಂದೆ ಪ್ರತಿ ನಿತ್ಯ ಉಚಿತ ಗಂಜಿ

ಇನ್ನುಮುಂದೆ ಪ್ರತಿ ನಿತ್ಯ ಗರ್ಭಿಣಿ ಮತ್ತು ಬಾಣಂತಿಯರಿಗೆ ಶಾಸಕರ ಜನ ಸಂಪರ್ಕ ಕಚೇರಿ ಆವರಣದ ಕ್ಯಾಂಟೀನ್‍ನಲ್ಲಿ ಉಚಿತ ಗಂಜಿ ಮತ್ತು ಬಿಸಿನೀರು ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆಯಿರುವ ರೋಗಿಗಳು ಬಂದು ಈ ವ್ಯವಸ್ಥೆ ಬಳಿಸಿಕೊಳ್ಳಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!