ಜಗಳೂರಿನ ಇಮ್ಮಣ್ಣನ ನೆನಪು…

Suddivijaya
Suddivijaya December 22, 2023
Updated 2023/12/22 at 3:22 PM

ಲೇಖಕರು
ಎನ್.ಟಿ.ಎರ್ರಿಸ್ವಾಮಿ, ಸಲಹಾ ಸಮಿತಿ ಸದಸ್ಯರು, ಸಾಹಿತಿಗಳು, ಲೀಡ್ ಬ್ಯಾಂಕ್ ನಿವೃತ್ತ ಮ್ಯಾನೇಜರ್, ಜಗಳೂರು.

ಸುದ್ದಿವಿಜಯ,(ವಿಶೇಷ)ಜಗಳೂರು:  ಮಹಮ್ಮದ್ ಇಮಾಂರವರು ಈ ನಾಡು ಕಂಡ ಅಪರೂಪದ ಧೀಮಂತ ಹಾಗೂ ಸಂಪನ್ನ ರಾಜಕಾರಣಿ. ರಾಜಕೀಯ ರಂಗದಲ್ಲಿ ಮಾತ್ರವಲ್ಲ, ಸಾಹಿತ್ಯ, ಶಿಕ್ಷಣ, ಕೃಷಿ, ನೀರಾವರಿ, ಭಾವೈಕ್ಯತೆ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವರೊಂದು ಅಪ್ಪಟ ಅಪರಂಜಿ.

ಮೈಸೂರು ಅರಸರ ಆಳ್ವಿಕೆ ಇರಲಿ, ಪ್ರಜಾಪ್ರಭುತ್ವವೇ ಇರಲಿ ಅಲ್ಲಿ ಇಮಾಂರವರು ತಮ್ಮ ಅಪಾರವಾದ ವಿದ್ವತ್ತು, ಶಾಸಕಾಂಗದ ಪಾಂಡಿತ್ಯ, ರಾಜನೀತಿ ತಜ್ಞತೆ, ಉನ್ನತ ಮೌಲ್ಯಗಳು, ಆದರ್ಶಯುತ ಬದುಕು, ಸರ್ವ ಧರ್ಮಗಳ ಸಮತಾಭಾವ, ಪರೋಪಕಾರಿ ಬುದ್ಧಿಗಳ ಮೂಲಕ ಎಲ್ಲರವ ನಮ್ಮಣ್ಣ ಈ ಇಮ್ಮಣ್ಣ ಎಂದೇ ಹೆಸರಾದವರು.

ಜಗಳೂರು ಸನಿಹದ ಮರೇನಹಳ್ಳಿ ಗ್ರಾಮದಲ್ಲಿ 1897ರಲ್ಲಿ ಜೆ.ಬಡೇಸಾಬ್ ಹಾಗೂ ಚಮನಬೀ ದಂಪತಿಗಳ ಏಕ ಮಾತ್ರ ಪುತ್ರನಾಗಿ ಜನಿಸಿದ ಇಮಾಂರವರು ಜಗಳೂರು, ಚಿತ್ರದುರ್ಗದಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿ ಪದವಿಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮತ್ತು ಕಾನೂನು ಪದವಿಯನ್ನು ಮದ್ರಾಸ್ ಲಾ ಕಾಲೇಜಿನಲ್ಲಿ ಮುಗಿಸಿದರು.

3 ವರ್ಷಗಳ ಕಾಲ ಚಿತ್ರದುರ್ಗದಲ್ಲಿ ವಕೀಲ ವೃತ್ತಿ ಮಾಡಿದರಾದರೂ ರಾಜಕೀ ಒಲವಿದ್ದ ಕಾರಣ ರಾಜಕಾರಣಿಯಾದರು. ಅದು ಈ ನಾಡಿಗೆ ಒಳಿತೇ ಆಯಿತು.

ಇಮಾಂರವರ ಪ್ರತಿಭೆಯನ್ನು ಗುರುತಿಸಿದ ಮೈಸೂರು ಮಹಾರಾಜರು 192ರಲ್ಲಿ ಇವರನ್ನು ಮೈಸೂರು ವಿವಿ ಕೌನ್ಸಿಲ್ ಹಾಗೂ ಸೆನೆಟ್ ಸದಸ್ಯರನ್ನಾಗಿ ನೇಮಕ ಮಾಡಿದರು. 1928ರಿಂದ 1940, 1946 ಮತ್ತು 1951 ರವರೆಗೆ ಇಮಾಂ ರವರು ಅಲ್ಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಒಂದು ಮೌನ ಕ್ರಾಂತಿಯನ್ನೇ ಮಾಡಿದರು.

'ಮುಷೀರ್ ಉಲ್ ಮುಲ್ಕ್ ' ಮಹಮ್ಮದ್ ಇಮಾಂ ಸಾಬ್
‘ಮುಷೀರ್ ಉಲ್ ಮುಲ್ಕ್ ‘ ಮಹಮ್ಮದ್ ಇಮಾಂ ಸಾಬ್

1930ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿಯೂ ನೇಮಕವಾದರು. ಅದೇ ಕಾಲಕ್ಕೆ ಚಿತ್ರದುರ್ಗ ಜಿಲ್ಲಾ ಬೋರ್ಡ್‍ನ ಅಧ್ಯಕ್ಷತೆ ಇವರನ್ನು ಅಪ್ಪಿಕೊಂಡಿತು. 1933 ರಿಂದ 1936ರ ವರೆಗೆ ಇಮಾಂರವರು ಜಗಳೂರು ಮುನಿಸಿಪಲ್ ಕೌನ್ಸಿಲ್‍ನ ಪ್ರಥಮ ಅಧ್ಯಕ್ಷರಾದರು. 1936 ರಿಂದ 40ರವರೆಗೆ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಕೈಗೊಂಡ ಗ್ರಾಮೀಣ ಅಭಿವೃದ್ಧಿ ಕೆಲಸಗಳು ಸಾಮಾನ್ಯ ಜನರಿಗೆ ಅತ್ಯಂತ ಉಪಯುಕ್ತವಾದವು.

1941ರಿಂದ 1945ರವರೆಗೆ ಇಮಾಂರವರು ಮೈಸೂರು ಮಹಾರಾಜರ ಆಳ್ವಿಕೆಯ ಮೈಸೂರು ರಾಜ್ಯದಲ್ಲಿ ಶಿಕ್ಷಣ, ರೇಷ್ಮೆ, ಅಬಕಾರಿ, ನೀರಾವರಿ ಹಾಗೂ ಲೋಕೋಪಯೋಗಿ ಸಚಿವರಾಗಿ ಕೈಗೊಂಡ ಕಾರ್ಯಗಳು ಇಂದಿಗೂ ಅಜರಾಮರವಾಗಿ ಉಳಿದಿವೆ.

ಇವರ ಕಾರ್ಯಗಳನ್ನು ಮೆಚ್ಚಿ 1945ರಲ್ಲಿ ‘ಮುಷೀರ್ ಉಲ್ ಮುಲ್ಕ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಇಮಾಂರವರ ಆಹ್ವಾನದ ಮೇರೆಗೆ 1937ರಲ್ಲಿ ಜಗಳೂರಿಗೆ ಬಂದ ಮೈಸೂರು ಮಹಾರಾಜರು ಇಮಾಂರವರ ಬಂಗಲೆಯಲ್ಲಿಯೇ ಒಂದು ದಿನ ಉಳಿದು ಇವರ ಆದರಾಥಿತ್ಯವನ್ನು ಸ್ವೀಕರಿಸಿದ್ದರು. ಫಕೀರರಿರಲಿ, ಪಂಡಿತರಿರಲಿ, ಎಲ್ಲರಲ್ಲಿಯೂ ಒಂದೇ ಸ್ನೇಹ, ಸಲುಗೆ ಇಮ್ಮಣ್ಣನವರದು.

ಸ್ವಾತಂತ್ರ ನಂತರರವೂ ಕೂಡಾ ಇಮಾಂರವರು ಸಲ್ಲಿಸಿದ ರಾಜಕೀಯ ಸೇವೆ ಅಮೋಘವಾದುದು. 1948 ರಿಂದ 1952ರವರೆಗೆ ಶಾಸನಸಭೆಯ ವಿರೋಧ ಪಕ್ಷದ ನಾಯಕರಾಗಿ ಉತ್ತಮ ಹೆಸರು ಗಳಿಸಿದವರು.

ಕರ್ನಾಟಕದ ಮೊದಲ 4 ಮುಖ್ಯಮಂತ್ರಿಗಳ ಕಾಲದಲ್ಲಿ ಇವರು ವಿರೋಧ ಪಕ್ಷದ ನಾಯಕರಾಗಿದ್ದುದು ಒಂದು ವಿಶೇಷ. ವಿಧಾನಸೌಧದ ಕಟ್ಟಡದಲ್ಲಿ ಕೆತ್ತಲಾಗಿರುವ ‘ಸರಕಾರದ ಕೆಸಲ ದೇವರ ಕೆಲಸ’ ಎಂಬ ಧ್ಯೇಯವಾಕ್ಯದ ರೂವಾರಿ ಇಮಾಂರವರು ಎಂಬುದು ಬಹಳ ಜನರಿಗೆ ತಿಳಿಯದ ಸಂಗತಿ.

1952ರಲ್ಲಿ ಇಮಾಂ ರವರ ಪ್ರಜಾಗೆ ಸೋಷಿಯಲೀಸ್ಟ್ ಪಾರ್ಟಿ ಮೂಲಕ ಚಿತ್ರದುರ್ಗ/ತುಮಕೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 197ರಲ್ಲಿ ಮತ್ತೆ ಪುನರ್ ಆಯ್ಕೆಯಾದರು. ಅಲ್ಲಿ ಅನೇಕ ಸಮಿತಿಗಳ ಅಧ್ಯಕ್ಷರಾದವರಲ್ಲದೇ ಲೋಕಸಭೆಯ ಹಂಗಾಮಿ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು.

ಅಟಲ್ ಜೀ, ಇಮಾಂ ಸಾಹೇಬರ ಬಗ್ಗೆ ಹೇಳಿದ್ದೇನು?

ಅಟಲ್ ಬಿಹಾರಿ ವಾಜಪೇಯ್, ಜಯಪ್ರಕಾಶ್ ನಾರಾಯಣ್, ಬಿ.ಡಿ.ಜತ್ತಿ, ಆಚಾರ್ಯ ಕೃಪಲಾನಿ, ಅಶೋಕ್ ಮೇಹ್ತಾರಂತಹ ಹಿರಿಯರ ಒಡನಾಟದಲ್ಲಿದ್ದ ಇಮಾಂರವರು ಅವರೆಲ್ಲರ ಅಚ್ಚುಮೆಚ್ಚಿನವರಾಗಿದ್ದರು.

ವಾಜಪೇಯಿಯವರು ಇಮಾಂರವರನ್ನು ‘ಇಮಾಂರವರು ಭಾರತದ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪ್ರತೀಕ’ ಅವರ ಜೀವನ ನಮಗೊಂದು ದಾರಿ ದೀಪವಿದ್ದಂತೆ. ಅವರ ಬೆಳಕಿನಲ್ಲಿ ನಾವು ನಮ್ಮ ನೆಲ್ಮೆಯನ್ನು ಕಂಡುಕೊಳ್ಳೋಣ ಎಂದಿದ್ದರು.

ನ್ಯಾ.ಸಂತೋಷ್ ಹೆಗಡೆ ಅವರಿಗೆ ಪ್ರಶಸ್ತಿ:

ಸಾಹಿತ್ಯ ಪ್ರೇಮಿ, ಕ್ರೀಡಾ ಪ್ರಿಯ, ಶಿಕ್ಷಣ ತಜ್ಞ, ಗ್ರಾಮೀಣ ಜನರ ಜೀವನಾಡಿ ಆಗಿದ್ದ ಇಮಾಂರವರು ಜಗಳೂರು ಮಾಣಿಕ್ಯ. ಅವರ ಹೆಸರಿನಲ್ಲಿ ಸ್ಥಾಪಿಸಾಗಿರುವ ಜೆ.ಎಂ. ಇಮಾಂ ಶಾಲೆ ಕಳೆದ 23 ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುಸಂಸ್ಕøತ ನಾಗರೀಕರನ್ನಾಗಿ ರೂಪಿಸುವಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ.

ಅವರ ಹೆಸರಿನಲ್ಲಿ 5ನೇ ವರ್ಷದ ‘ಮುಷೀರ್-ಉಲ್-ಮುಲ್ಕ್’ ಜೆಎಂ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿಯನ್ನು ಈ ಬಾರಿ ಭಾರತದ ಸವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗಡೆ ಅವರಿಗೆ ನೀಡುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದ್ದು,

ಅರ್ಥಪೂರ್ಣ ಕಾರ್ಯಕ್ರಮ ಇದೇ ಡಿ.27 ಮತ್ತು 28 ರಂದು ಬುಧವಾರ ಮತ್ತು ಗುರುವಾರ ಜೆಎಂ ಇಮಾಂ ಸ್ಮಾರಕ ಶಾಲೆಯಲ್ಲಿ ನಡೆಯಲಿದೆ. ತಪ್ಪದೇ ಎಲ್ಲರೂ ಆಗಮಿಸಿ.

Share this Article
Leave a comment

Leave a Reply

Your email address will not be published. Required fields are marked *

error: Content is protected !!