ಜಗಳೂರು: ವೈದ್ಯರ ನಿರ್ಲಕ್ಷ್ಯ ಬಾಣಂತಿ ಸಾವು, ಸಂಬಂಧಿಕರ ಆಕ್ರೋಶ!

Suddivijaya
Suddivijaya November 8, 2022
Updated 2022/11/08 at 1:49 PM

ಸುದ್ದಿವಿಜಯ, ಜಗಳೂರು: ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯ ಡಾ.ರವಿಕುಮಾರ್ ಮಾಡಿರುವ ಎಡವಟ್ಟಿನಿಂದ ಬಾಣಂತಿ ಆಶಾ(22)ಸಾವನ್ನಪ್ಪಿದ್ದಾರೆ ಎಂದು ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ರಮೇಶ್ ಆರೋಪ ಮಾಡಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್‍ನಲ್ಲಿ ಶವವಿಟ್ಟು ಗ್ರಾಮಸ್ಥರು, ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಕಳೆದ ಅ.30 ರಂದು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ಆಶಾ ಅವರನ್ನು ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿ ಗಂಡು ಮಗುವನ್ನು ಹೊರತೆಗೆದರು. ನಂತರ ಆರು ದಿನಗಳ ಕಾಲ ಆಶಾ ಆರೋಗ್ಯವಾಗಿದ್ದರು. ಒಮ್ಮೆಲೆ ಎದೆಯಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಅವರಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು.

ಆದರೆ ಆರೋಗ್ಯ ಸಮಸ್ಯೆ ಗಂಭೀರವಾಗುತ್ತಿದ್ದಂತೆ ಇಲ್ಲಿ ಸಾಧ್ಯವಿಲ್ಲ. ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಎಂದು ವೈದ್ಯ ಡಾ.ರವಿಕುಮಾರ್ ಸೂಚನೆ ನೀಡಿದರು. ಸಿಜೇರಿಯನ್ ಮಾಡುವಾಗಲೇ ಹೊಟ್ಟೆಗೆ ಎಲ್ಲೆಂದರಲ್ಲಿ ಗಾಯ ಮಾಡಿದ್ದಾರೆ. ಮುಖಕ್ಕೆ ಫ್ಲಾಸ್ಟರ್ ಹಾಕಿದ್ದಾರೆ.

ಹೀಗಾಗಿ ಆಕೆಗೆ ಜಿಲ್ಲಾಸ್ಪತ್ರೆಯಲ್ಲೇ ಆರೋಗ್ಯ ಗಂಭೀರವಾಗಿತ್ತು. ನಾವು ಬಡವರು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹಣವಿಲ್ಲ ಎಂದು ಹೇಳಿದರೂ ಅವರು ನಮ್ಮನ್ನು ಬಲವಂತವಾಗಿ ಬಸವೇಶ್ವರ ಆಸ್ಪತ್ರೆಗೆ ಕಳುಹಿಸಿದರು. ಆದರೆ ಅಲ್ಲಿ ದಾಖಲಾದ ಕೆಲವೇ ಗಂಟೆಗಳಲ್ಲಿ ನನ್ನ ಪತ್ನಿ ಮೃತಪಟ್ಟಿದ್ದಾಳೆ.

 ಜಗಳೂರು ತಾಲೂಕಿನ ಕಾನನಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್‍ನಲ್ಲಿ ಆಶಾ ಅವರ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ಮಾಡಿದರು.
ಜಗಳೂರು ತಾಲೂಕಿನ ಕಾನನಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್‍ನಲ್ಲಿ ಆಶಾ ಅವರ ಶವವಿಟ್ಟು ಸಂಬಂಧಿಕರು ಪ್ರತಿಭಟನೆ ಮಾಡಿದರು.

ಇದಕ್ಕೆ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ರವಿಕುಮಾರ್ ಕಾರಣ. ಮೃತಪಟ್ಟ ನಂತರ ಆಕೆಯ ಶವವನ್ನು ಪರೀಕ್ಷೆ ಮಾಡದೇ ಕಳುಹಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ದಾಖಲಿಸಲು ಅವರು ಬಿಡಲಿಲ್ಲ. ನಮಗೆ ಎರಡು ಸಾವಿರ ಹಣ ಕೊಟ್ಟು ಕಳುಹಿಸಿದರು ಎಂದು ಆಕ್ರೋಶ ವ್ಯಕ್ತಿಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಗಳೂರು ಪಟ್ಟಣದ ಪಿಎಸ್‍ಐ ಡಿ.ಸಾಗರ್ ಭೇಟಿ ನೀಡಿದರು. ಪೊಲೀಸರು ಮಧ್ಯ ಪ್ರವೇಶಿಸಿದ ನಂತರ ಮೃತ ದೇಹವನ್ನು ಅಂತ್ಯಕ್ರಿಯೆ ನೆರವೇರಿಸಿದರು.

ಸರಕಾರಿ ಆಸ್ಪತ್ರೆಯ ವೈದ್ಯ ರವಿಕುಮಾರ್ ಕಾರಣ
ಚಳ್ಳಕೆರೆ ಸಮೀಪದ ವರವು ಗ್ರಾಮದಿಂದ ನನ್ನ ಮಗಳನ್ನು ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಸಿಜೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ ಮೇಲೆ ಆಕೆಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರೂ ಸೂಕ್ತ ಚಿಕಿತ್ಸೆ ನೀಡಲಿಲ್ಲ. ಆರೋಗ್ಯ ಸಮಸ್ಯೆ ಬಿಗಡಾಯಿಸುತ್ತಿದ್ದಂತೆ ಡಾ.ರವಿಕುಮಾರ್ ನಮ್ಮ ಮೇಲೆ ಒತ್ತಡ ಹಾಕಿ ಬಸವೇಶ್ವರ ಆಸ್ಪತ್ರೆಗೆ ಕಳುಹಿಸಿದರು. ಐಸಿಯುನಲ್ಲಿ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಆಕೆ ಮೃತಪಟ್ಟ ವಿಷಯವನ್ನು ಬಸವೇಶ್ವರ ಆಸ್ಪತ್ರೆಯ ವೈದ್ಯರು ತಿಳಿಸಿದರು. ಇದಕ್ಕೆ ಸರಕಾರಿ ಆಸ್ಪತ್ರೆಯ ವೈದ್ಯ ರವಿಕುಮಾರ್ ಕಾರಣ.
-ಕಮಲಮ್ಮ, ಮೃತ ಆಶಾ ತಾಯಿ

ನಮ್ಮಿಂದ ಯಾವುದೇ ಲೋಪವಾಗಿಲ್ಲ.
ಅ.30 ರಂದು ಹೆರಿಗೆಗಾಗಿ ಆಸ್ಪತ್ರೆಗೆ ಆಶಾ ಅವರನ್ನು ದಾಖಲಿಸಿದರು. ಸಿಜೇರಿಯನ್ ಮೂಲಕ ಮಗುವನ್ನು ಹೊರತೆಗೆದೆವು. ನಂತರ ಅವರಿಗೆ ಬಿಪಿ, ಉಸಿರಾಟದ ಸಮಸ್ಯೆ ತೊಂದರೆಯಿತ್ತು. ಅಷ್ಟೇ ಅಲ್ಲ ಹೃದಯಾಘಾತವಾಯಿತು. ತಜ್ಞ ವೈದ್ಯರನ್ನು ಕರೆಸಿ ಆಕ್ಸಿಜನ್ ಮೂಲಕ ಚಿಕಿತ್ಸೆ ನೀಡಿದರೂ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸೀನಿಯರ್ ವೈದ್ಯರ ಸಲಹೆ ಮೇರಿಗೆ ತಕ್ಷಣವೇ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದೆವು. ಕಾರ್ಡಿಯಾಕ್ ಅರೆಸ್ಟ್ ನಿಂದ ಅವರು ಮೃತಪಟ್ಟಿದ್ದಾರೆ. ನಮ್ಮಿಂದ ಯಾವುದೇ ಲೋಪವಾಗಿಲ್ಲ.
-ಡಾ. ಬಿ.ಎನ್.ರವಿಕುಮಾರ್, ಜಿಲ್ಲಾ ಆಸ್ಪತ್ರೆಯ ವೈದ್ಯರು, ಚಿತ್ರದುರ್ಗ

 

Share this Article
Leave a comment

Leave a Reply

Your email address will not be published. Required fields are marked *

error: Content is protected !!