ಸುದ್ದಿವಿಜಯ, ಜಗಳೂರು: ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪುರೆ ಮಂಗಳವಾರ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ತಹಶೀಲ್ದಾರ್ ಗ್ರೇಡ್-2 ಮಂಜಾನಂದ ಮತ್ತು ಕಂಪ್ಯೂಟರ್ ಆಪರೇಟರ್ ಪ್ರಭು ಅವರನ್ನು ತರಾಟೆಗೆ ತೆಗೆದುಕೊಂಡರು.
ಮಲೆಮಾಚಿಕೆರೆ ಗ್ರಾಮದ ಚಿತ್ತಪ್ಪ ಎಂಬ ವೃದ್ಧ ತಮ್ಮ ಪತ್ನಿಯ ವೃದ್ಧಾಪ್ಯ ವೇತನ ಎಂಟು ತಿಂಗಳಿಂದ ಬಂದಿಲ್ಲ. ಅಲೆದು ಅಲೆದು ಸಾಕಾಗಿದೆ. ಫೋಸ್ಟ್ ಆಫೀಸ್ ಅಕೌಂಟ್‍ನಲ್ಲೂ ಹಣ ಜಮೆಯಾಗಿಲ್ಲ, ಬ್ಯಾಂಕ್ ಅಕೌಂಟ್‍ಗೂ ಹಣ ವರ್ಗಾವಣೆಯಾಗಿಲ್ಲ. ಹಣ ಬರುತ್ತಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಚಕ್‍ಮಾಡಿ ಮಾಹಿತಿ ಕೊಡುತ್ತೇನೆ ಎಂದು ಪ್ರಭು ವೃದ್ಧನಿಗೆ ಹೇಳಿದರೂ ಕಚೇರಿಯಲ್ಲಿದ್ದ ಖರ್ಚಿಯಿಂದ ವೃದ್ಧ ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು.
ಕಚೇರಿಯ ರೌಂಡ್ಸ್‍ನಲ್ಲಿದ್ದ ಲೋಕಾಯುಕ್ತ ಎಸ್‍ಪಿ ವೃದ್ಧನನ್ನು ತಡೆದು ಇದು ಸರಕಾರಿ ಕಚೇರಿ ಅಧಿಕಾರಿಗಳ ಮೇಲೆ ಹಲ್ಲೆ, ಗಲಾಟೆ ಮಾಡುವಂತಿಲ್ಲ ಎಂದು ವಾರ್ನಿಂಗ್ ನೀಡಿದರು. ವೃದ್ಧನ ಪಿಂಚಿಣಿ ವ್ಯವಸ್ಥೆಯಲ್ಲಾಗಿರುವ ಲೋಪದ ಬಗ್ಗೆ ಗ್ರಾಡ್-2 ತಹಶೀಲ್ದಾರ್ ಅವರಿಗೆ ತರಾಟೆಗೆ ತೆಗೆದುಕೊಂಡರು. ವೃದ್ಧರನ್ನು ಕಚೇರಿಗೆ ಅಲೆಸುವ ಬದಲು ಸ್ಥಳದಲ್ಲೇ ಪರಿಹರಿಸಿ ಕಳುಹಿಸಲು ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ಅವರ ಪತ್ನಿಯ ವೃದ್ಧಾಪ್ಯ ವೇತನ ಎಂಟು ತಿಂಗಳ ಹಣ ಎಲ್ಲಿ ಹೋಯಿತು, ಯಾರ ಅಕೌಂಟ್‍ಗೆ ಜಮಾವಾಗಿದೆ ಎಂದು ಸ್ಥಳದಲ್ಲೇ ಇದ್ದ ಲೋಕಾಯುಕ್ತ ಇನ್‍ಸ್ಪೆಕ್ಟರ್ ಆಂಜನೇಯ ಅವರು ಮಲೆಮಾಚಿಕೆರೆ ಪೋಸ್ಟ್ ಆಫೀಸರ್ ಮತ್ತು ಪಿಕೆಜಿಬಿ ಬ್ಯಾಂಕ್ ಸಿಬ್ಬಂದಿಗೆ ದೂರವಾಣಿ ಮೂಲಕ ವಿಚಾರಿಸಿದರು.
ಹಣ ಬಂದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಂತೆ. ಸಿಟ್ಟಿಗೆದ್ದ ಎಸ್‍ಪಿ ಸರಕಾರಿ ಕಚೇರಿ ಎಂದರೆ ತಮಗೆ ಇಷ್ಟ ಬಂದಂತೆ ಕೆಲಸ ಮಾಡುವುದು ಅಲ್ಲ. ಪಿಂಚಿಣಿಗಾಗಿ ಅಲೆಸುವುದು ಮಾನವೀಯ ಸಂಸ್ಕøತಿ ಅಲ್ಲ. ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುವುದು ನಿಮ್ಮ ಕೆಲಸ. ನಿಮಗೆ ಅಕೌಂಟ್ ಬಗ್ಗೆ ಜ್ಞಾನ ಇದೆಯೋ ಇಲ್ಲವಾ ಎಂದು ಪ್ರಶ್ನಿಸಿದರು.
ಅದಕ್ಕೆ ತಬ್ಬಿಬ್ಬಾದ ಕಂಪ್ಯೂಟರ್ ಆಪರೇಟರ್ ಪ್ರಭು ಮತ್ತು ಗ್ರೇಡ್-2 ತಹಶೀಲ್ದಾರ್ ಅವರ ಮೇಲೆ ದೂರು ದಾಖಲಿಸಿಕೊಳ್ಳಿ ಎಂದು ಸೂಚನೆ ನೀಡಿದರು. ಇನ್ನೆರಡು ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆಯನ್ನು ವೃದ್ಧ ಚಿತ್ತಪ್ಪ ಅವರಿಗೆ ಲೋಕಾಯುಕ್ತ ಎಸ್‍ಪಿ ನೀಡಿದರು.
ಗೊಂದಲದ ಗೂಡಾಗಿದ್ದ ಕಚೇರಿ
ಲೋಕಾಯುಕ್ತ ಎಸ್‍ಪಿ ಬರುತ್ತಿದ್ದಂತೆ ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಮಧ್ಯವರ್ತಿಗಳ ದಾಂಧಲೆಯಿಂದ ಕಚೇರಿಯಲ್ಲಿ ಕೆಲಸಗಳಾಗುತ್ತಿಲ್ಲ ಎಂದು ಅನೇಕರು ದೂರು ನೀಡಿದರು. ಪ್ರತಿ ಶಾಖೆಯ ಕೊಠಡಿಗಳಿಗೆ ಎಸ್‍ಪಿ ಭೇಟಿ ನೀಡಿ ಕೆಲಸ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹರಿಸಿದರು.
ಈ ವೇಳೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಲೋಕಾಯುಕ್ತ ಇನ್‍ಸ್ಪೆಕ್ಟರ್ ಆಂಜನೇಯ, ಎಎಸ್‍ಐ ಆಶಿವಾಜಿ, ಗ್ರಾಡ್-2 ತಹಶೀಲ್ದಾರ್ ಮಂಜನಾಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಹಶೀಲ್ದಾರ್ ಕಚೇರಿಯಲ್ಲಿ ಕೆಲಸಗಳಾಗುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ ದಿಢೀರ್ ಭೇಟಿ ನೀಡಿದ್ದೇವೆ. ಪಿಂಚಿಣಿ ಸಮಸ್ಯೆ, ಸರ್ವೆ ಇಲಾಖೆಯಲ್ಲಿ ವಿಳಂಬ, ರೆಕಾಡ್ಸ್ ರೂಂ ಪರಿಶೀಲನೆ ಮಾಡಲಾಗಿದೆ. ಸಾರ್ವಜನಿಕರ ದೂರುಗಳನ್ನು ಆಲಿಸಿದ್ದೇವೆ ಮತ್ತು ಮಧ್ಯವರ್ತಿಗಳ ಕಾಟ ತಪ್ಪಿಸುವ ಸಂಬಂಧ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ.
-ಎಂ.ಎಸ್. ಕೌಲಾಪುರೆ, ಲೋಕಾಯುಕ್ತ ಎಸ್‍ಪಿ, ದಾವಣಗೆರೆ
20ಜೆಎಲ್‍ಆರ್‍ಚಿತ್ರ1ಎ: ಜಗಳೂರು ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪುರೆ ಮಂಗಳವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಚಾಟಿ ಬೀಸಿದರು.