ಸುದ್ದಿವಿಜಯ, ಜಗಳೂರು: ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ ವಿದ್ಯಾರತ್ನ ಡಾ.ತಿಪ್ಪೇಸ್ವಾಮಿ ಅವರು. ಅವರು ಹಾಕಿಕೊಟ್ಟ ಮಾರ್ಗದಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಶಿಕ್ಷಣದಿಂದಲೇ ಸಾಮಾಜಿಕ ಕ್ರಾಂತಿ ಸಾಧ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರತಿಪಾದಿಸಿದರು.
ಪಟ್ಟಣದ ಎಸ್.ಎಸ್.ವಿ ವಿದ್ಯಾವರ್ಧಕ ಸಂಘದ ಎನ್‍ಎಂಕೆ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಸುವರ್ಣ ಕನ್ನಡ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಎಲ್ಲಾ ಬಯಕೆಗಳನ್ನು ಶಿಕ್ಷಣ ಮಾತ್ರ ಈಡೇರಿಸಲು ಸಾಧ್ಯ.
ಮನುಷ್ಯನಾಗಿ ಹುಟ್ಟಿದ ಮೇಲೆ ತೃಪ್ತಿಕರ ಜೀವನ ಸಾಗಿಸಬೇಕು ಎಂದಾದರೆ ಮೊದಲು ವಿದ್ಯಾರ್ಥಿಗಳು ತಮ್ಮ ಗುರಿ ಏನೆಂದು ಅರ್ಥಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನನ್ನ ಇಬ್ಬರು ಮಕ್ಕಳಿಗೆ ನನ್ನ ಕಷ್ಟದ ದಿನಗಳಲ್ಲಿ ಹೊಟ್ಟೆ ಬಟ್ಟೆ ಕಟ್ಟಿ ವಿದ್ಯಾಭ್ಯಾಸ ಕೊಡಿಸಿದೆ. ಹೀಗಾಗಿ ಎರಡನೇ ಮಗ ಎಂ.ಡಿ.ವಿಜಯ್‍ಕುಮಾರ್ ಆದಾಯ ತೆರಿಗೆ ಅಧಿಕಾರಿಯಾದ.
ಮೊದಲನೇ ಪುತ್ರ ಎಂ.ಡಿ.ಕೀರ್ತಿಕುಮಾರ್ ಸರಕಾರಿ ಆಸ್ಪತ್ರೆಯಲ್ಲಿ ಉದ್ಯೋಗಿಯಾದ. ಅವರಿಗೆ ಶಿಸ್ತುಬದ್ಧ ಶಿಕ್ಷಣ ನೀಡಿದ್ದಕ್ಕೆ ಅವರು ಆ ಮಟ್ಟಕ್ಕೆ ಬೆಳೆದರು. ಈಗ ನಾನು ಶಾಸಕನಾಗಲು ಇಬ್ಬರು ಮಕ್ಕಳು ಸಹಕಾರಿಯಾದರು ಎಂದರು.ಜಗಳೂರು ತಾಲೂಕಿನ ಎನ್‍ಎಂಕೆ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಶಾಸಕ ಬಿ.ದೇವೇಂದ್ರಪ್ಪ ಸನ್ಮಾನಿಸಿದರು.
ಬರಪೀಡಿತ ಜಗಳೂರು ತಾಲೂಕಿನಲ್ಲಿ ಶಿಕ್ಷಣಕ್ಕೆ ಕೊರತೆಯಿಲ್ಲ. ಎನ್‍ಎಂಕೆ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಕೌಶಲ ಆಧಾರಿದ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿನಿಯರಿಗೆ ಕರಾಟೆ, ತಾಂತ್ರಿಕ ಶಿಕ್ಷಣ, ಜೆಇಇ, ನೀಟ್ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಮಾಡಿ ಕಳುಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಈ ಮಟ್ಟಕ್ಕೆ ಶಾಲೆ ಬೆಳೆಯಲು ಗೌರವಕಾರ್ಯದರ್ಶಿ ಎನ್.ಎಂ.ಲೋಕೇಶ್ ಕಾರಣ. ಅವರು ಶಿಕ್ಷಣವನ್ನು ವ್ಯವಹಾರಿಕ ದೃಷ್ಟಿಯಿಂದ ನೋಡದೇ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.
ಶಾಲೆಯ ಗೌರವ ಕಾರ್ಯದರ್ಶಿ ಎನ್.ಎಂ.ಲೋಕೇಶ್ ಮಾತನಾಡಿ, ನಮ್ಮ ಶಾಲೆ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಬೇಕಾಗುವ ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದೇವೆ.
ಅಬಾಕಸ್, ಕರಾಟೆ ಸೇರಿದಂತೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ತಕ್ಕಂತೆ ಮಕ್ಕಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಶಿಕ್ಷಣ ನೀಡುತ್ತಿದೆ.
ಮಕ್ಕಳು ಎತ್ತರಕ್ಕೆ ಬೆಳೆಯಬೇಕು ಎನ್ನುವ ಆಸೆ ನನ್ನದು. ಅದನ್ನೂ ಪೂರ್ಣ ಗೊಳಿಸುತ್ತೇವೆ. ತಾಳೆ, ವಿನಯ, ಶ್ರಮ ಇದ್ದರೆ ಮಾತ್ರ ಜೀವನದಲ್ಲಿ ನಿಮ್ಮ ಗುರಿ ತಲುಪಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಎಂ. ಹಾಲಸ್ವಾಮಿ, ಕುಮಾರ್, ಕೆ.ಬಿ.ರವೀಂದ್ರ, ಡಾ.ಎನ್.ಪಿ.ಘಟ್ಟಿ ಮಾತನಾಡಿದರು. ಈ ವೇಳೆ ಅತಿ ಹೆಚ್ಚು ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.