ಸುದ್ದಿವಿಜಯ, ಜಗಳೂರು:ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರ ಕೂಲಿ ಕೆಲಸ ನೀಡುವಂತೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಹಾಲೇಕಲ್ಲು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಕೂಲಿಕಾರರು ಪ್ರತಿಭಟನೆ ನಡೆಸಿದರು.
ಬೆಳಗ್ಗೆ 11 ಗಂಟೆಗೆ ಆಗಮಿಸಿದ ನೂರಾರು ಮಂದಿ ಕೂಲಿಕಾರರು ಗ್ರಾಮ ಪಂಚಾತಿಯಿತಿ ಕಚೇರಿಯೊಳಗಿದ್ದ ಎಲ್ಲಾ ಸಿಬ್ಬಂದಿಗಳನ್ನು ಹೊರಗೆ ಕಳಿಸಿ ಬೀಗ ಹಾಕಿ ಅಧಿಕಾರಿಗಳು ವಿರುದ್ದ ಘೋಷಣೆಗಳನ್ನು ಕೂಗಿದರು.
ಈಗಾಗಲೇ ಸಂಭವಿಸಿದ ಭೀಕರ ಬರಗಾಲದಿಂದ ಬೆಳೆಗಳೆಲ್ಲಾ ಒಣಗಿವೆ. ಭೂಮಿಗೆ ಹಾಕಿದ ಬೀಜ. ಗೊಬ್ಬರ ಹಾಳಾಗಿದೆ. ಈಗಾಗಲೇ ಸಾಲ ಮಾಡಿದ ಹಣಕ್ಕೆ ಬಡ್ಡಿಕಟ್ಟಲು ಸಾಧ್ಯವಾಗುತ್ತಿಲ್ಲ.
ಜಮೀನುಗಳಲ್ಲಿ ಕೆಲಸವಿಲ್ಲ. ಇದರಿಂದ ಕೆಲಸವು ಇಲ್ಲದೇ ಕೂಲಿಯೂ ಸಿಗದೇ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹಾಗಾಗಿ ನರೇಗಾ ಯೋಜನೆಯೇ ಬಡವರ ಪಾಲಿಗೆ ಆಸರೆಯಾಗಿದೆ.
ಆದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಹಾಲೇಕಲ್ಲು ಗ್ರಾಮದ ಕೆರೆಯಲ್ಲೂ ಸುಮಾರು ೮೦೦ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕೂಲಿಕಾರರಿಗೆ 319 ರೂ ಇದೆ ಆದರೆ ಅಧಿಕಾರಿಗಳು 207 ರೂ ಹಣ ಖಾತೆಗೆ ತುಂಬಿದ್ದಾರೆ.
ಉಳಿದ ಹಣ ಏಕೆ ಹಾಕಿಲ್ಲವೆಂದು ಪ್ರಶ್ನಿಸಿದರು. ಅಭಿವೃದ್ದಿ ಅಧಿಕಾರಿಗಳು, ಇಂಜಿನಿಯರ್‌ಗಳು ಸರಿಯಾಗಿ ಮಾಹಿತಿ ನೀಡುವುದಿಲ್ಲ. ಸ್ಪಂದಿಸುವುದಿಲ್ಲ.
ಬಡವರ ಹೆಸರಿನಲ್ಲಿ ಹಣ ದುರುಪಯೋಗ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮುಂಗಾರು ಮಳೆ ಆರಂಭದವರೆಗೂ ನರೇಗಾದಡಿ ಕೂಲಿ ಕೆಲಸ ನೀಡಬೇಕು, ಸರ್ಕಾರ ಕೂಲಿ ಹಣವನ್ನು ಹೆಚ್ಚಳ ಮಾಡಬೇಕು, 150 ಮಾನವ ದಿನಗಳನ್ನು ಮಾಡಬೇಕು ಎಂದರು.
” ಕೆಲಸ ಮಾಡುವ ಕೂಲಿಕಾರರಿಗೆ ಅನ್ಯಾಯ ಮಾಡುವುದಿಲ್ಲ. ಹಂತ ಹಂತವಾಗಿ ಎಲ್ಲರ ಖಾತೆಗಳಿಗೂ ಹಣ ತುಂಬಲಾಗುತ್ತಿದೆ. ಕೆಲವರಿಗೆ ಕಡಿಮೆ ಕೂಲಿ ಬಿದ್ದಿದೆ ಎಂಬ ಆರೋಪವಿದೆ. ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು”
– ಲೋಹೀತ್‌ಕುಮಾರ್. ಪಿಡಿಒ ಹಾಲೇಕಲ್ಲು ಗ್ರಾ.ಪಂ.
ಈ ಸಂದರ್ಭದಲ್ಲಿ ಓಂಕಾರಪ್ಪ, ಶಶಿಕುಮಾರ್, ಸುರೇಶ್, ಚೀರಂಜಿವಿ, ರೇವಣಸಿದ್ದಪ್ಪ, ನಾಗರಾಜ್, ಬಸವರಾಜ್, ಮಲ್ಲಿಕಾರ್ಜುನ ಮತ್ತಿತರರಿದ್ದರು.