ಸುದ್ದಿವಿಜಯ, ಜಗಳೂರು: ಪೊಲೀಸ್ ಠಾಣೆ ಸಾರ್ವಜನಿಕರ ಆಸ್ತಿಯಾಗಿದ್ದು ಯಾವುದೇ ಸಮಸ್ಯೆಗಳು ಬಂದರೂ ಸಾರ್ವಜನಿಕರು ಧೈರ್ಯವಾಗಿ ಬಂದು ದೂರು ನೀಡಿ, ಭಯ ಪಡುವ ಅವಶ್ಯಕತೆ ಇಲ್ಲ. ಏನೇ ಸಮಸ್ಯೆಗಳಿಗದ್ದರೂ 112 ಟೋಲ್ ಫ್ರಿ ನಂಬರ್‍ಗೆ ಕರೆ ಮಾಡಿ ಎಂದು ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ ಸಾರ್ವಜನಿಕರಿಗೆ ಧೈರ್ಯ ತುಂಬಿದರು.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವತಿಯಿಂದ ಕರೆಯಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಸಭೆ ಆರಂಭವಾಗುತ್ತಿದ್ದಂತೆ ಪಪಂ ಸದಸ್ಯರಾದ ರವಿಕುಮಾರ್, ರಮೇಶ್‍ರೆಡ್ಡಿ ಹಾಗೂ ವಕೀಲ ಹನುಮಂತಪ್ಪ ಅವರು ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಸೆಳೆದರು. ಚಳ್ಳಕೆರೆ-ದಾವಣಗೆರೆ ರಸ್ತೆ, ಮರೇನಹಳ್ಳಿ ರಸ್ತೆ, ತಾಲೂಕು ಕಚೇರಿ ರಸ್ತೆಯಲ್ಲಿ ಹೂ, ಹಣ್ಣು ವ್ಯಾಪಾರಿಗಳು, ರಸ್ತೆ ಬದಿ ತಳ್ಳುಗಾಡಿ ಅಂಗಡಿಗಳಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲುತ್ತಿದ್ದಾರೆ ಎಂದು ದೂರಿದರು.
ಪಟ್ಟಣದಲ್ಲಿ ಗೂಡಂಗಡಿಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಮದ್ಯ ಮಾರಾಟ ನಡೆಯುತ್ತಿದೆ. ರಸ್ತೆ ಮಧ್ಯೆ ಕುಡಿಯುವ ಜನ ಹೆಚ್ಚಾಗಿದ್ದಾರೆ ಎಂದು ಸದಸ್ಯ ರಮೇಶ್‍ರೆಡ್ಡಿ ಆರೋಪಿಸಿದರು.
ಗಾಂಧಿ ವೃತ್ತ, ಸಾರ್ವಜನಿಕ ಆಸ್ಪತ್ರೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.ಇದಕ್ಕೆ ಉತ್ತರಿಸಿದ ಪಿಐ ಶ್ರೀನಿವಾಸ್‍ರಾವ್, ಸಾರ್ವಜನಿಕರಿಗೆ ಅರಿವಿನ ಕೊರತೆಯಿದೆ. ಅವೈಜ್ಞಾನಿಕವಾಗಿ ರಸ್ತೆ ಮತ್ತು ಫುಟ್‍ಪಾತ್ ನಿರ್ಮಾಣ ಮಾಡಲಾಗಿರುವುದರಿಂದ ಎಲ್ಲಿ ಖಾಲಿ ಜಾಗ ಇರುವಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಪಟ್ಟಣದಲ್ಲಿ 18 ಸಿಸಿಟಿವಿ ಅಳವಡಿಸಲಾಗಿದೆ.
ವಾಹನ ಸವಾರರು ಎಚ್ಚರದಿಂದ ಪಾರ್ಕಿಂಗ್ ಮಾಡಿ. ಅವೈಜ್ಞಾನಿಕವಾಗಿ ಪಾರ್ಕಿಂಗ್ ಮಾಡಿದರೆ ದಂಡವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭೂಮಿ ಎಷ್ಟಿದೆಯೋ ಅಷ್ಟೇ ಇದೆ. ಜನ ಸಂಖ್ಯೆ ಬೆಳೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಜನರು ಅರ್ಥಮಾಡಿಕೊಳ್ಳಬೇಕು. ಮರೇನಹಳ್ಳಿ ರಸ್ತೆಯಲ್ಲಿ ಫುಟ್‍ಪಾತ್ ನಿರ್ಮಾಣ ಸಾರ್ವಜನಿಕರಿಗೆ ಅನುಕೂಲವಾಗಿಲ್ಲ. ಅದನ್ನು ಒಡೆದು ವೈಜ್ಞಾನಿಕವಾಗಿ ಮಾಡಿದರೆ ಸಮಸ್ಯೆಯಾಗುವುದಿಲ್ಲ ಎಂದು ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಗಮನಕ್ಕೆ ತಂದರು.
ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಮಾತನಾಡಿ, ಆಟೋ ಚಾಲಕರು ಆಟೋ ನಿಲ್ಲಿಸಲು ಜಾಗ ಕೇಳಿದ್ದಾರೆ. ಫುಟ್‍ಪಾತ್ ವ್ಯಾಪಾರಿಗಳು ಮೊಂಡುತನ ಬಿಡಬೇಕು. ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಸಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಶಾಂತಿಸಾಗರದಿಂದ ಬರುವ ನೀರಿನ ಪೈಪ್ ಲೈನ್ ಸಮಸ್ಯೆಯಿದೆ.
ಅದಕ್ಕೆ ಕಾರಣ, ಮಾರ್ಗವಾಗಿ ಬರುವ ಹಳ್ಳಿಗಳ ಜನರೇ ಬಳಸುತ್ತಾರೆ. ಪಟ್ಟಣಕ್ಕೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ರಿಪೇರಿ ಖರ್ಚು ಮಾತ್ರ ಪಪಂ ಮಾಡಬೇಕು ಎಂದು ಸಮಸ್ಯೆ ಬಿಚ್ಚಿಟ್ಟರು.
ಪಪಂ ಮಾಜಿ ಅಧ್ಯಕ್ಷೆ ತಿಮ್ಮಕ್ಕ ಮಾತನಾಡಿ, ಪ್ಲಾಸ್ಟಿಕ್ ಉತ್ಪಾದಿಸುವ ಫ್ಯಾಕ್ಟರಿ ನಿಲ್ಲಿಸಿದರೆ ಯಾರೂ ಮಾರಾಟ ಮಾಡುವುದಿಲ್ಲ. ವ್ಯಾಪಾರಿಗಳು ಗಿರಾಕಿಗಳನ್ನು ಹಿಡಿದಿಡಲು ಕದ್ದು ಮುಚ್ಚಿ ಪ್ಲಾಸ್ಟಿಕ್ ಕವರ್ ಬಳಸುತ್ತಾರೆ. ಮೊದಲು ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸಿ ಎಂದರು.
ಡಿಎಸ್‍ಎಸ್ ಸಂಚಾಲಕ ಸತೀಶ್, ಬಾಬು, ಬಸವರಾಜ್ ಪಟ್ಟಣದ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್: ಆಟೋ ಚಾಲರಿಗೆ ಉಚಿತ ಡ್ರೈವಿಂಗ್ ಲೈಸೆನ್ಸ್‍ಗಾಗಿ ನಮ್ಮ ಠಾಣೆಯಲ್ಲಿ ವ್ಯವಸ್ಥೆ ಮಾಡುತ್ತೇವೆ. ದಾಖಲೆಗಳನ್ನು ತನ್ನಿ ಎಂದರೂ ಆಟೋ ಡ್ರೈವರ್‍ಗಳು ಬರುತ್ತಿಲ್ಲ. ಪೊಲೀಸರು ಎಂದರೆ ಭಯ ಪಡುವ ಅಗತ್ಯವಿಲ್ಲ.
ದಾಖಲೆಗಳ ತಂದರೆ, ಅರ್ಜಿ ಭರ್ತಿಮಾಡಿ ಎಲ್‍ಎಲ್‍ಆರ್ ಬರುವಂತೆ ಪೊಲೀಸ್ ಠಾಣೆಯಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ಇನ್‍ಸ್ಪೆಕ್ಟರ್ ಶ್ರೀನಿವಾಸ್‍ರಾವ್ ಹೇಳಿದರು.
ತಹಶೀಲ್ದಾರ್ ಅರುಣ್ ಕಾರಗಿ ಮಾತನಾಡಿ, ಸಾರ್ವಜನಿಕರು ಕಂದಾಯ ಕಟ್ಟದೇ ಇದ್ದರೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ಯತೆ ಮೇರೆಗೆ ಅಭಿವೃದ್ಧಿ ಕೆಲಸ ಮಾಡುತ್ತೇವೆ. ತೆರಿಗೆ ಕಟ್ಟ ಸೌಲಭ್ಯ ಪಡೆಯಿರಿ ಎಂದರು.
ಸಭೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ಎಸ್.ಡಿ.ಸಾಗರ್, ಪಟ್ಟಣದ ಹೂ, ಹಣ್ಣು ವ್ಯಾಪಾರಿಗಳು, ಆಟೋ ಚಾಲಕರು ಸೇರಿದಂತೆ ಅನೇಕರು ಇದ್ದರು.