ಸುದ್ದಿವಿಜಯ, ಜಗಳೂರು: ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಘನತೆಯಿಂದ ನಿವೃತ್ತಿ ಹೊಂದುವುದು ಸವಾಲಿನ ಕೆಲಸವಾಗಿದೆ ಎಂದು ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ರಾವ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ನಿವೃತ್ತಿಯಾದ ಪಿಎಸ್ಐ ಸಿ.ಎನ್.ಬಸವರಾಜ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸಮಾಜಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊಂದಿದೆ.
ಮೊದಲೆಲ್ಲಾ ಸಮಾಜಿಕ ಜಾಲತಾಣಗಳು ಇಲ್ಲದ ಕಾಲದಲ್ಲಿ ಆರೋಪಿಗಳ ಪತ್ತೆಗೆ ಬಹಳ ಕಷ್ಟ ಪಡಬೇಕಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳು ಬಂದ ನಂತರ ವ್ಯಕ್ತಿಗಳ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿದೆ ಹೀಗಾಗಿ ಆರೋಪಿಗಳು ಯಾರೆಂದು ಸುಲಭವಾಗಿ ಪತ್ತೆ ಹಚ್ಚಬಹುದು.
ಪಿಎಸ್ಐ ಬಸವರಾಜ್ ಅವರು 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವುದುದೇ ದೊಡ್ಡ ಸಾಧನೆ. ಒತ್ತಡಗಳ ಬದುಕಿನಲ್ಲಿ ಅವಧಿ ಪೂರ್ಣಗೊಳಿಸುವುದು ಕಷ್ಟಸಾಧ್ಯ. ನಿವೃತ್ತಿಯ ಹೊಸ್ತಿಲಲ್ಲಿ ಇದ್ದರೂ ಬಹಳ ಬದ್ಧತೆಯಿಂದ ಕೆಲಸ ಮಾಡಿದ್ದಾರೆ.
ಪೊಲೀಸ್ ಇಲಾಖೆ ಸೇರಿದ ಮೇಲೆ ವೈಯಕ್ತಿಕ ಬದುಕಿಗೆ ಸಮಯ ಕೊಡುವುದು ಕಷ್ಟವಾಗುತ್ತದೆ ಆದರೆ ಬಸವರಾಜ್ ಅವರು ಮುಗುಳ್ನಗುತ್ತಲೇ ಸಮಸ್ಯೆ ಎಂದು ಬಂದವರಿಗೆ ತಾಳ್ಮೆಯಿಂದಲೇ ಉತ್ತರಿಸಿ ಸಮಸ್ಯೆಗೆ ಪರಿಹಾರ ಮತ್ತು ಬಡವರಿಗೂ ಸಹಾಯ ಮಾಡುತ್ತಿದ್ದ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಸ್ಮರಿಸಿದರು.
ಪಿಎಸ್ಐ ಸಿ.ಎನ್.ಬಸವರಾಜ್ ಮಾತನಾಡಿ, ತಮ್ಮ ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ನಾನಾ ಕಷ್ಟಗಳು ಎದುರಾದವು. ಕಷ್ಟಗಳು ಬಂದಾಗ ಪೊಲೀಸರು ಕುಗ್ಗಬಾರದು. ಆರೋಪಗಳು ಬಂದರೂ ಅವುಗಳನ್ನು ಎದುರಿಸುವ ಧೈರ್ಯವಿರಬೇಕು.
ಪೊಲೀಸ್ ಇಲಾಖೆ ಎಂದರೆ ಅನೇಕರಲ್ಲಿ ತಪ್ಪು ಭಾವನೆಯಿದೆ. ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಆದರೆ ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಿದರೆ ನಮ್ಮ ಕಾಯಕ ಮತ್ತು ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಪೊಲೀಸ್ ಸಿಬ್ಬಂದಿಯೊಂದಿಗೆ ತಮ್ಮ ಸೇವಾ ಅವಧಿಯ ಅನುಭವ ಹಂಚಿಕೊಂಡರು.
ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ರಾವ್ ಮತ್ತು ಪಿಎಸ್ಐ ಎಸ್.ಡಿ.ಸಾಗರ್ ಅವರು ನಿವೃತ್ತರಾದ ಬಸವರಾಜ್ ದಂಪತಿಗಳಿಗೆ ಗೌರವಿಸಿದರು. ಕಾರ್ಯಕ್ರಮದಲ್ಲಿ ಎಎಸ್ಐ ನಾಗರಾಜ್, ಚಂದ್ರಶೇಖರ್, ಸಿಬ್ಬಂದಿಗಳಾದ ನಾಗರಾಜ್, ಆನಂದ್, ಮಾರುತಿ, ರಮೇಶ್, ನಾಗಭೂಷಣ್, ಉಮಾಶಂಕರ್, ಶಿವಕುಮಾರ್, ಮಾರೆಪ್ಪ ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು.