ಸುದ್ದಿವಿಜಯ, ಜಗಳೂರು: ತಾಲೂಕಿನಾದ್ಯಂತ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದು ಜುಲೈ ಮೂರನೇ ವಾರದ ಒಳಗೆ ಮೆಕ್ಕೆಜೋಳ ಬಿತ್ತನೆ ಮಾಡಬೇಕು. ತಡವಾಗಿ ಬಿತ್ತನೆ ಮಾಡಿದರೆ ಲದ್ದಿ ಹುಳುಗಳ ಕಾಟ ವ್ಯಾಪಕ ಎಂದು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ರೈತರಿಗೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ ಇದುವರೆಗೂ 181 ಮಿಮೀ ವಾಡಿಕೆಯಷ್ಟು ಮಳೆಯಾಗಬೇಕಿತ್ತು. ಆದರೆ 13 ಮಿಮೀ ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ 152 ಮಿಮೀ ಮಳೆಯಾಗಿದ್ದು ಶೇ.16 ರಷ್ಟು ಮಳೆ ಕೊರತೆ ಕಂಡು ಬಂದಿದೆ.
ಬಿಳಿಚೋಡು ಹೋಬಳಿಯಲ್ಲಿ 133 ಮಿಮೀ ಮಳೆಯಾಗಿದ್ದು, ಶೇ.17 ರಷ್ಟು ಕೊರತೆ ಮತ್ತು ಸೊಕ್ಕೆ ಹೋಬಳಿಯಲ್ಲಿ 127ರಷ್ಟು ಮಳೆಯಾಗಿದ್ದು ಶೇ.36 ರಷ್ಟು ಮಳೆಯ ಕೊರತೆ ಉಂಟಾಗಿದೆ. ಒಟ್ಟಾರೆ ತಾಲೂಕಿನಾದ್ಯಂತ ಶೇ.24ರಷ್ಟು ಮಳೆ ಕೊರತೆಯುಂಟಾಗಿದೆ ಎಂದು ತಿಳಿಸಿದ್ದಾರೆ.
ಮೆಕ್ಕೆಜೋಳ ಬಿತ್ತನೆಗೆ ಇನ್ನು 10 ದಿನಗಳು ಬಾಕಿ ಉಳಿದಿವೆ. ಜುಲೈ ಮೂರನೇ ವಾರದ ನಂತರ ಮೆಕ್ಕೆಜೋಳ ಬಿತ್ತನೆ ಮಾಡಿದರೆ ಕೀಟ ಹಾಗೂ ರೋಗ ಬಾಧೆ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದ್ದಾರೆ.
ಬಿತ್ತನೆ ಪ್ರಮಾಣ ಕುಂಠಿತ:
ತಾಲೂಕಿನಾದ್ಯಂತ 57 ಸಾವಿರ ಹೆ.ಗುರಿ ನಿಗದಿಪಡಿಸಲಾಗಿದ್ದು, ಇದುವರೆಗೂ ಮೆಕ್ಕೆಜೋಳ 20.85 ಹೆ. ತೊಗರಿ, 3.50 ಹೆ, ಶೇಂಗಾ 2.85 ಹೆ, ಸೂರ್ಯಕಾಂತಿ 205 ಹೆ. ಹತ್ತಿ 798 ಹೆ. ಒಟ್ಟು 27,033 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಳೆವಿಮೆ ಕಟ್ಟಲು ಕಡೆಯ ದಿನ:
ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಕಟ್ಟಲು ಗ್ರಾಪಂ ಮಟ್ಟದಲ್ಲಿ ಮಳೆಯಾಶ್ರಿತ ಮೆಕ್ಕೆಜೋಳ, ರಾಗಿ, ತೊಗರಿ, ಸೂರ್ಯಕಾಂತಿ, ಶೇಂಗಾ, ಬೇಳೆಕಾಳು ಆಯ್ಕೆಯಾಗಿದ್ದು, ಬೆಳೆವಿಮೆ ಕಟ್ಟಲು ಜುಲೈ 31 ಕಡೆಯದಿನವಾಗಿರುತ್ತದೆ. ಬೆಳೆ ವಿಮೆ ನೊಂದಾಯಿಸಿಕೊಂಡ ರೈತರು ಖಡ್ಡಾಯವಾಗಿ ಬೆಳೆ ಸಮೀಕ್ಷೆ ಆಪ್‍ನಲ್ಲಿ ನಮೂದಿಸಬೇಕು ಎಂದು ರೈತರಿಗೆ ಮಾಹಿತಿ ನೀಡಿದ್ದಾರೆ.