ಸುದ್ದಿವಿಜಯ, ಜಗಳೂರು: ಮಹರ್ಷಿ ವಾಲ್ಮೀಕಿ ರಾಮಾಯಣ ಬರೆಯುವ ಮೂಲಕ ಜಗತ್ತಿನ ವಿದ್ವಾಂಸರಲ್ಲಿ ಅಗ್ರಜರಾಗಿದ್ದಾರೆ. ಅವರ ಮೇಲೆ ಎಲ್ಲ ದೇವರು ಮತ್ತು ದೇವತೆಗಳ ಅನುಗ್ರಹವಿದೆ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಹೇಳಿದರು.
ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಬುಧವಾರ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಭಾಗವಹಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಶನೆ ಸಲ್ಲಿಸಿ ಮಾತನಾಡಿದರು.

ವಾಲ್ಮೀಕಿ ಮಹರ್ಷಿಗಳು ಮಹಾ ಕಾವ್ಯಗಳನ್ನು ರಚಿಸುವ ಮೂಲಕ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ. ಅವರ ಮಹಾಕಾವ್ಯಗಳು ಪ್ರಸ್ತುತ ಕಾಲಕ್ಕೂ ದರ್ಪಣವಾಗಿವೆ. ಅನೇಕ ಮಹಾನ್ ಕವಿಗಳು ಅವರ ಕಾವ್ಯಗಳಿಂದಲೇ ವಿವಿಧ ರಾಮಾಯಣಗಳನ್ನು ರಚಿಸಿದ್ದಾರೆ.
ವಾಲ್ಮೀಕಿ ಸಮುದಾಯ ಬಲಗೊಳ್ಳಬೇಕಾದರೆ ಶಿಕ್ಷಣ ಅತ್ಯಂತ ಅವಶ್ಯಕ. ಸಾಮಾಜಿಕ ಅಸಮಾನತೆ ಹೋಗಬೇಕಾದರೆ ಯುವಕರು ಶೈಕ್ಷಣಿಕ ಕ್ರಾಂತಿ ಮಾಡಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಜಾನಪದ ನಂಬಿಕೆಗಳ ಪ್ರಕಾರ ಮಹರ್ಷಿ ವಾಲ್ಮೀಕಿ ಮುಂದಿನ ಜೀವನದಲ್ಲಿ ತುಳಸಿದಾಸರಾಗಿ ಜನಿಸಿದರು ಮತ್ತು ರಾಮಾಯಣದಿಂದ ರಾಮಚರಿತ ಮಾನಸವನ್ನು ರಚಿಸಿದರು ಎನ್ನಲಾಗಿದೆ.ಗ್ರಾಮೀಣ ಭಾಗದಲ್ಲಿ ವಾಲ್ಮೀಕಿ ಜಯಂತ್ಯುತ್ಸವಗಳನ್ನು ಐಕ್ಯತೆಯಿಂದ ಆಚರಿಸಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಬೇಕು ಎಂದು ಯುವಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಸ್ತುವಳ್ಳಿ ಬಾಬು,ನಜೀರ್ ಅಹಮದ್, ತಿಮ್ಮಣ್ಣ, ಹೊನ್ನೂರ್ ಸಾಬ್, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಹಮದ್ ಅಲಿ, ಶಿವಕುಮಾರ್, ಬಸವನಗೌಡ, ಚಿಂತಣ್ಣ, ಶುಕ್ರಸಾಬ್, ಅಜ್ಜಯ್ಯ, ಪಾಲಯ್ಯ, ಕೃಷ್ಣಪ್ಪ ಸೇರಿ ಅನೇಕರು ಇದ್ದರು.