ಸುದ್ದಿವಿಜಯ, ಜಗಳೂರು: ಮಠಗಳು ಈ ನಾಡಿನ ಸಾಂಸ್ಕೃತಿಕ, ಶೈಕ್ಷಣೀಕ, ಬೌದ್ಧಿಕ ಕೇಂದ್ರಗಳು. ಭಕ್ತನಾದವನು ಕಾಯಾ, ವಾಚಾ, ಮನಸ್ಸಾ ಮಠಗಳನ್ನು ಬೆಳೆಸಲು ಉದಾರತೆ ತೋರಿದರೆ ಮಾತ್ರ ಮಠಗಳ ಅಭಿವೃದ್ಧಿ ಸಾಧ್ಯ ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಬುಧವಾರ ಲಿಂಗೈಕ್ಯ ಜಿ.ಕೆ.ಸಿದ್ದಪ್ಪನವರ ಶಿವಗಣಾರಾಧನೆ ಅಂಗವಾಗಿ ಸರ್ವ ಶರಣರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಹಿರಿಯರಾದ ಜಿ.ಕೆ.ಸಿದ್ದಪ್ಪನವರು ಮಠದ ಹಿರಿಯ ಗುರುಗಳಾದ ಶಿವಕುಮಾರ ಸ್ವಾಮೀಜಿಗಳ ಆಪ್ತ ಶಿಷ್ಯರಾಗಿದ್ದರು.
ಜಮೀನುದಾರರಾಗಿದ್ದರೂ ಸಹ ಕಾಯಕ ನಿಷ್ಠೆ ಮತ್ತು ಮಠದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ ಅಪರೂಪದ ಚೇತನರಾಗಿದ್ದರು. ತರಳಬಾಳು ಮಠದಲ್ಲಿ ಏನೇ ಸಭೆ ಸಮಾರಂಭಗಳು ನಡೆದರೂ ಅದನ್ನು ಪ್ರಶ್ನಿಸುವ ಮತ್ತು ಸರಿ ತಪ್ಪುಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಮಠಗಳು ಅಭಿವೃದ್ಧಿಯಾಗಬೇಕಾದರೆ ಭಕ್ತರಿಗೆ ಅರ್ಪಣಾ ಮನೋಭಾವ ಸಮಾಜ ಮುಖಿ ಚಿಂತನೆಗಳು ಇದ್ದರೆ ಮಾತ್ರ ಸಾಧ್ಯ ಎಂದು ಹೇಳಿದರು. ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಸರ್ವ ಶರಣರ ಸಮಾರಂಭದಲ್ಲಿ
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಾನು ಸಹ ಶ್ರೀಮಠದ ಭಕ್ತನಾಗಿ ಮಠದ ಸಾಂಸ್ಕೃತಿಯನ್ನು ಬಲ್ಲವನು. ವಿದ್ಯಾರತ್ನ ತಿಪ್ಪೇಸ್ವಾಮಿ ಮತ್ತು ಸಿದ್ದಪ್ಪನವರ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದೇನೆ.
ನನ್ನ ಮತ್ತು ಅವರ ಒಡನಾಟ 45 ವರ್ಷಗಳಷ್ಟು ಹಳೆಯದು. ತರಳಬಾಳು ಮಠ ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಸದಾ ಮುಂದಿದೆ. ಹಠವಾದಿಯಾಗಿದ್ದ ಸಿದ್ದಪ್ಪನವರು ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದರು.
ಊರಿನ ಅಭಿವೃದ್ಧಿಗೆ ಸದಾ ಚಿಂತಿಸುತ್ತಿದ್ದ ಹಿರಿಯ ಜೀವ ಇಲ್ಲ ಎಂಬುದು ಮರೆಯಲು ಸಾಧ್ಯವಿಲ್ಲ. ಹುಟ್ಟಿದಾಗ ಜಾತಕ, ಬದುಕಿದ್ದಾಗ ನಟಕ, ಸತ್ತಾಗ ಸೂತಕ ನೋಡುತ್ತಾರೆ. ಜೀವನದಲ್ಲಿ ಪರೋಪಕಾರದ ಬಗ್ಗೆ ಚಿಂತಿಸಿದಾಗ ಸಮಾಜ ಮತ್ತು ವೈಯಕ್ತಿಯ ಅಭಿವೃದ್ಧಿಯಾಗುತ್ತದೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್, ನಿವೃತ್ತ ಉಪನ್ಯಾಸಕರಾದ ಐ.ಜಿ.ಚಂದ್ರಶೇಖರ್, ಸುಭಾಷ್ ಚಂದ್ರ, ಅಖಿಲ ಭಾರತ ವೀರಶೈವ ಮಾಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ, ಎಸ್.ಕೆ.ಮಂಜುನಾಥ್, ವಿಶ್ವಬಂಧು ಪ್ರತಿಷ್ಠಾನದ ಅಧ್ಯಕ್ಷ ಮರುಳಸಿದ್ದಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್‍ಎಂಎಲ್ ತಿಪ್ಪೇಸ್ವಾಮಿ, ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಅರಿಶಿಣಗುಂಡಿ ರಾಜು, ಚಿತ್ರದುರ್ಗದ ಟಿಎಪಿಎಂಸಿ ಅಧ್ಯಕ್ಷ ಕೋಗುಂಡೆ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.