ಸುದ್ದಿವಿಜಯ, ಜಗಳೂರು: ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಹಲವಾರು ಸಿದ್ದಿ ಪುರುಷರು, ಸಾಧಕರು ಸಂಚರಿಸಿದ್ದು, ಇದೊಂದು ಪುಣ್ಯ ಸ್ಥಳವಾಗಿದೆ ಎಂದು ಬೆಂಗಳೂರಿನ ಸರ್ಪ ಭೂಷಣ ಶಿವ ಯೋಗಿಗಳ ಮಠದ ಮನ್ನಿರಂಜನ ಪ್ರಣವ ಸ್ವರೂಪಿ ಮಲ್ಲಿಕಾರ್ಜುನ ದೇವರು ಹೇಳಿದರು.
ತಾಲೂಕಿನ ದೊಣೆಹಳ್ಳಿ ಗ್ರಾಮದ ದಾಸೋಹ ಮಠದ ಆವರದಲ್ಲಿ ಸೋಮವಾರ ನಡೆದ ಶ್ರೀಶರಣ ಬಸವೇಶ್ವರ ಸ್ವಾಮಿಯ ಉದ್ದೇಶಿತ ನೂತನ ಮಠ, ದೇವಸ್ಥಾನ ನಿರ್ಮಾಣ, ಆಕರ್ಷಕ, ಮಹಾದ್ವಾರ, ಕಲ್ಯಾಣಿ, ಹಾಗೂ ಮಠದ ಪ್ರಾಂಗಣದ ನವೀಕರಣಕ್ಕೆ ಭೂಮಿ ಪೂಜೆಯನ್ನು ನೇರವೇರಿಸಿದ ನಂತರ ಸಭೆಯ ಅಧ್ಯಕ್ಷತೆ ವಹಿಸಿ ಆರ್ಶೀವಚನ ನೀಡಿದರು.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎಲ್ಲರೂ ಕೈಜೊಡಿಸಿದರೆ ಆರೇ ತಿಂಗಳಲ್ಲೆ ಮಠದ ಕಾಮಗಾರಿಗಳು ಪೂರ್ಣ ಗೊಳಿಸಲು ಸಾಧ್ಯವಾಗಲಿದೆ. ಪುಣ್ಯ ಕೆಲಸ ಮಾಡಲು ಶುಭ ಅಶುಭ ಎಂದು ಭಾವಿಸದೆ ಕಾರ್ಯದ ಕಡೆ ಹೆಚ್ಚುಗಮನ ಹರಿಸಬೇಕು ಎಂದರು.
ಮಠಗಳಲ್ಲಿ ದಾಸೋಹದ ಜೊತೆಗೆ ಶೈಕ್ಷಣಿಕ ಕ್ರಾಂತಿಯನ್ನು ಮಾಡುವಂತ ಕೆಲಸಗಳು ನಡೆಯುತ್ತಿದ್ದು, ಬರದ ನಾಡಿನಲ್ಲಿರುವ ಈ ಗ್ರಾಮದಲ್ಲಿ ಅತೀ ಪುರಾತನವಾಗಿ ಶ್ರೀಶರಣ ಮಠವನ್ನು ಸ್ಥಾಪಿಸಿ ಹಲವಾರು ಸೇವಾ ಕಾರ್ಯಗಳನ್ನು ಮಾಡಿದ್ದಾರೆ.ಇಂದು ಈ ಮಠದ ನೂತನ ಕಟ್ಟಡಕ್ಕ ಭೂಮಿ ಪೂಜೆ ಮಾಡಿರುವುದು ಸಂತಸದ ವಿಚಾರವಾಗಿದೆ. ಇದರ ಕೆಲಸ ಪೂರ್ಣ ಗೊಳಿಸುವುದರ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇದರಿಂದ ಹಿಂದುಳಿದ ಬಡ ವರ್ಗದ ಮಕ್ಕಳಿಗೆ ಶಿಕ್ಷಣ ಮತ್ತು ಆಶ್ರಯ ದೊರೆಯಲಿದೆ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಮಠ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಎಚ್.ಪಿ ರಾಜೇಶ್ ಮಾತನಾಡಿ, ದಾಸೋಹ ಮಠವು ಒಂದು ಸಮುದಾಯಕ್ಕೆ ಸಿಮಿತವಾಗಿಲ್ಲ ಸರ್ವ ಸಮುದಾಯಕ್ಕೆ ಸೇರಿದೆ ಮಠವು ಎಲ್ಲಾ ಸಮುದಾಯಗಳ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಮಠಕ್ಕೆ ರೈತರು ಬೆಳೆದ ಬೆಲೆಯಲ್ಲಿ ಇಂತಿಷ್ಟು ದವಸ ಧಾನ್ಯಗಳನ್ನು ನೀಡುತ್ತ ಬಂದಿದ್ದೇವೆ. ಮಠದ ಸಮಿತಿಯ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಪ್ರಾಮಾಣಿಕವಾಗಿ ಮಠದ ಸೇವೆ ಸಲ್ಲಿಸುತ್ತೇನೆ. ಗ್ರಾಮದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ಇದ್ದು ಸಾಕದ್ಟು ಭಕ್ತರು ಬಂದು ಹೋಗಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾನಾಮಡುಗಿನ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣರ್ಯರು ಮಾತನಾಡಿ, ನೂತನ ಮಠ ನಿರ್ಮಾಣಕ್ಕೆ ಪೂರ್ವಭಾವಿ ಸಭೆ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಅಂದು ಮಠದ ಭಕ್ತರು ದೇಣಿಗೆಯನ್ನು ನೀಡಿದರು. ಬದುಕು ಕಟ್ಟಿಕೊಳ್ಳಲು ಬೆಂಗಳೂರಿನಲ್ಲಿ ನೆಲೆಸಿರುವ ಭಕ್ತರೊಂದಿಗೆ ಸಭೆ ನಡೆಸಿದಾಗ ಅವರಿಂದ ದೇಣಿಗೆ ಸಹ ನೀಡಿದ್ದಾರೆ. ಬರೀ ದಾಸೋಹಕ್ಕೆ ಸೀಮಿತವಾಗದೆ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತದೆ ಎಂದರು.
ಗ್ರಾಮದ ಮುಖಂಡ ಹಾಗೂ ಹಿರಿಯ ಪರ್ತಕರ್ತ ದೊಣೆಹಳ್ಳಿ ಗುರುಮೂರ್ತಿ, ಗಡಿಮಾಕುಂಟೆ ಶಿವಕುಮಾರ್ ಮಾತನಾಡಿದರು. ಈ ವೇಳೆ ಮುಖಂಡರಾದ ಅಕ್ಕಿ ಜಯ್ಯಣ್ಣ, ಮಾಜಿ ಗ್ರಾಮ ಪಂಚಾಯಿತಿ ಅದ್ಯಕ್ಷ ವೀರೇಶ್, ಸೊಸೈಟಿ ಅಧ್ಯಕ್ಷ ಪ್ರಕಾಶ್, ಬಸವರಾಜ್, ಪ್ರಭುಸ್ವಾಮಿ, ದಿನೇಶ್, ಶರಣೇಶ್, ಪ್ರಕಾಶ್, ಹನುಮಂತಾಪುರ ಚಿತ್ತಪ್ಪ ಸೇರಿದಂತೆ ಇತರರು ಇದ್ದರು.