ಸುದ್ದಿವಿಜಯ, ಜಗಳೂರು: ಬೆಟ್ಟದಷ್ಟು ತಾಳ್ಮೆ, ಸಹಾಯ ಬೇಡಿ ಬಂದವರ ಕಾಮಧೇನು, ದೀನ ದಲಿತರ ಸಂಕಷ್ಟಗಳಿಗೆ ಮಿಡಿಯುವ ಸಹೃದಯಿ ಎಂದೇ ಹೆಸರಾಗಿರುವ ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಇಂದು (ಸೋಮವಾರ) ಸಂಜೆ 5 ಗಂಟೆಗೆ ನಿವೃತ್ತರಾಗಲಿದ್ದಾರೆ.
ಜಗಳೂರು ತಾಲ್ಲೂಕು ಸೇರಿದಂತೆ ದಾವಣಗೆರೆ, ಹೊನ್ನಾಳಿ, ಚಿತ್ರದುರ್ಗದಲ್ಲಿ ತಮ್ಮ ಸೇವೆ ಸಲ್ಲಿಸಿ ಎಲ್ಲಿಯೂ ಯಾರಿಂದಲೂ ಕಪ್ಪು ಚುಕ್ಕೆ ಬಾರದಂತೆ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲಿಸಿದ ಬಿ.ಮಹೇಶ್ವರಪ್ಪ ಅವರ ಜೀವನವೇ ಒಂದು ರೋಚಕ.
ಅವರು ಬಡತನ ಎಂಬ ಬೆಂಕಿಯಲ್ಲಿ ಅರಳಿದ ಗುಲಾಬಿ ಎಂದರೆ ತಪ್ಪಾಗಲಿಕ್ಕಿಲ್ಲ. ಹುಟ್ಟಿದ್ದು ಜುಲೈ 22, 1963ರಲ್ಲಿ ಚಿತ್ರದುರ್ಗ ನಗರದ ಕಾಮನಭಾವಿ ಬಡಾವಣೆಯಲ್ಲಿ. ತಂದೆ ಬಸಪ್ಪ, ತಾಯಿ ಲಕ್ಷ್ಮಮ್ಮ ದಂಪತಿಯ ಆರು ಜನ ಮಕ್ಕಳಲ್ಲಿ ನಾಲ್ವರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳು.
ನಾಲ್ವರು ಗಂಡು ಮಕ್ಕಳಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಇಬ್ಬರು ತಂಗಿಯರ ಮುದ್ದಿನ ಅಣ್ಣ ಬಿ.ಮಹೇಶ್ವರಪ್ಪ. ಅವರಿಗೆ ಪತ್ನಿ ಎಚ್.ಎಂ. ಗಂಗಮ್ಮ, ಪುತ್ರಿ ಎಂ.ಜಿ.ಕೀರ್ತನಾರ ಜೊತೆ ಜಗಳೂರು ಪಟ್ಟಣದಲ್ಲೇ ವಾಸವಾಗಿದ್ದಾರೆ.
ಸಂಕಷ್ಟಗಳಿಗೆ ಮಿಡಿಯುವ ಅಧಿಕಾರಿ:
ಸುದೀರ್ಘ 33 ವರ್ಷಗಳ ಕಾಲ ಸರಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಬಿ.ಮಹೇಶ್ವರಪ್ಪ ಅವರಿಗೆ ದೀನದಲಿತರು, ಬಡವರು ಎಂದರೆ ಪ್ರೇಮ. ಮೇಲು, ಕೀಳು ಎಂಬ ಭೇದ ಭಾವವಿಲ್ಲದ ನಿಷ್ಕಳಂಕ ಮಗುವಿನಂತಹ ಮನಸ್ಸು.
ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆ, ಸಾಮಾಜಿಕ ಕಾರ್ಯಗಳಲ್ಲಿ ಅಳಿಲು ಸೇವೆ, ಸರಕಾರಿ ಅಧಿಕಾರಿಗಳ ಸಮಸ್ಯೆಗಳಿಗೂ ಸ್ಪಂದಿಸುವ ದೊಡ್ಡ ಮನಸ್ಸಿನ ಅಧಿಕಾರಿ ಎಂದೇ ಖ್ಯಾತಿ ಹೊಂದಿದ್ದಾರೆ. ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿರುವ ಅವರು ಎಂದೂ ಸಹ ಅಧಿಕಾರದ ಧರ್ಪ ತೋರಿದವರಲ್ಲ.
ಕಚೇರಿಗೆ ಬಂದವರನ್ನು ಕುಳ್ಳಿರಿಸಿ ಮಾತನಾಡಿಸಿ ಸಮಸ್ಯೆ ಬಗೆ ಹರಿಸಿಯೇ ಕಳುಹಿಸುವ ಸಹೃದಯಿ ಅಧಿಕಾರಿ. ಇಡೀ ತಾಲೂಕಿನ ಪ್ರತಿ ಗ್ರಾಮದಲ್ಲೂ ಚಿರಪರಿಚಿತವಾದ ಅಧಿಕಾರಿ ಎಂದರೆ ಅದು ಬಿ.ಮಹೇಶ್ವರಪ್ಪನವರು.
ಸರಕಾರಿ ಅಧಿಕಾರಿಯಾಗಿ ಸೇವೆ:
1981ರಲ್ಲಿ ದಿನಗೂಲಿ ನೌಕರರಾಗಿ ಚಿತ್ರದುರ್ಗ ನಗರದ ಸರಕಾರಿ ಕಲಾ ಕಾಲೇಜಿನ ಹಾಸ್ಟೆಲ್‍ನಲ್ಲಿ ಸೇವೆ ಆರಂಭಿಸಿದ ಅವರು 1994ರ ವರೆಗೆ ಸೇವೆ ಸಲ್ಲಿಸಿದರು. ನಂತರ ಪೂರ್ಣಾವಧಿ ಸರಕಾರಿ ಅಧಿಕಾರಿಯಾಗಿ 1996 ರಿಂದ ಸೇವೆ ಆರಂಭಿಸಿದ ಅವರು ಜಗಳೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ ಎರಡು ವರ್ಷಗಳ ಕಾಲ ಹೊನ್ನಾಳಿ ತಾಲ್ಲೂಕಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು.
ನಂತರ 2010ರಲ್ಲಿ ಜಗಳೂರು ಪಟ್ಟಣಕ್ಕೆ ವಾರ್ಗವಣೆಯಾಗಿ 2015ರವರೆಗೂ ಇಲಾಖೆಯಲ್ಲಿ ಎಫ್‍ಡಿಎ ಆಗಿ ಸೇವೆ ಸಲ್ಲಿಸಿದರು. 2015ರಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ್ದರೂ ಸಹ ಅವರ ಸೇವೆ ಜಗಳೂರಿಗೆ ಮೀಸಲಾಯಿತು.
2019 ರಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಅವರು ಸುದೀರ್ಘ ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಇಂದು ತಮ್ಮ ಸೇವಾ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ಕಿಟ್ ವಿತರಿಸಿ ಬಡವರಿಗೆ ನೆರವಾಗಿದ್ದರು.
ಜನ ಮೆಚ್ಚಿದ ಅಧಿಕಾರಿ:
ಮಾಜಿ ಶಾಸಕರಾದ ಅಶ್ವತ್ಥರೆಡ್ಡಿ, ಬಸಪ್ಪ, ಟಿ.ಗುರುಸಿದ್ದನಗೌಡ್ರು, ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ ಅವರ ಅವಧಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದ ಬಿ.ಮಹೇಶ್ವರಪ್ಪ ಅವರು ಪ್ರಸ್ತುತ ಶಾಸಕರಾಗಿರುವ ಬಿ.ದೇವೇಂದ್ರಪ್ಪ ಸೇರಿದಂತೆ ಎಲ್ಲ ಆಡಳಿತ ಅವಧಿಯಲ್ಲಿ ಸೈ ಎನ್ನಿಸಿಕೊಂಡ ಅಧಿಕಾರಿ.
ಅನ್ನದಾತ, ಕೊಡುಗೈ ದಾನಿ ಎಂದೇ ಫೇಮಸ್ ಆಗಿರುವ ಅವರು ಜನ ಮೆಚ್ಚಿದ, ಜಗ ಮೆಚ್ಚಿದ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದಾರೆ. ಇಂದು ನಿವೃತ್ತಿಯಾಗುತ್ತಿರುವ ಬಿ.ಮಹೇಶ್ವರಪ್ಪ ಅವರಿಗೆ ಜಗಳೂರು ಜನತೆ ಮತ್ತು ಎಲ್ಲ ಅಧಿಕಾರಿ ವರ್ಗಗಳ ಪರವಾಗಿ ಹೃದಯ ಪೂರ್ವಕ ಬೀಳ್ಕೊಡುಗೆಯನ್ನು ‘ಸುದ್ದಿವಿಜಯ ವೆಬ್ ನ್ಯೂಸ್’ ಅರ್ಪಿಸುತ್ತಿದೆ.
ಸರ್ ನಿಮ್ಮ ಸೇವೆ ಇಷ್ಟಕ್ಕೇ ಸೀಮಿತವಾಗದೇ ರಾಜಕೀಯ ಕ್ಷೇತ್ರದಲ್ಲೂ ಮುಂದುವರೆದು ಸಮಾಜ ಸೇವೆ ನಿರಂತರವಾಗಿರಲಿ. ನಿಮಗೆ ಆರೋಗ್ಯ, ಆಯಸ್ಸು ವೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.