ಸುದ್ದಿವಿಜಯ, ಜಗಳೂರು: ಮೈಸೂರು ರಾಜರು 115 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ 32 ಟಿಎಂಸಿ ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿರುರವ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರದ ನೀರನ್ನು ರೈತರಿಗೆ ಸದ್ಬಳಕೆ ಮಾಡುವಲ್ಲಿ ಪ್ರಭುತ್ವ ವಿಫಲಾಗಿವೆ ಎಂದು ಸರಕಾರದ ವಿರುದ್ಧ ಭದ್ರಾ ಮೇಲ್ದಂಡೆ ಯೋಜನೆ ಹೋರಾಟಗಾರ ಹಾಗೂ ನೀರಾವರಿ ತಜ್ಞ ತೋರಣಗಟ್ಟೆ ತಿಪ್ಪೇಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.
ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 5 ತಾಲೂಕುಗಳಿಗಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರೂಪಿಸಿ ನೀರಾವರಿ ವ್ಯಾಪ್ತಿಗೆ ಒಳಪಡಿಸಿತ್ತು. ಆದರೆ ಅನುಷ್ಠಾನ ಹಂತದಲ್ಲಿ 5 ತಾಲೂಕುಗಳನ್ನು ಯೋಜನೆಯಿಂದ ತೆಗೆದು ಹಾಕಿ ಸರಕಾರವು ಅರೆ ಮಲೆನಾಡಿನ ಪ್ರದೇಶಕ್ಕೆ ಸೀಮಿತಗೊಳಿಸಿರುದರಿಂದ ಇಲ್ಲಿನ ರೈತರಿಗೆ ಈಗ ಉಳಿದಿರುವ ಜಲ ಮೂಲವೆಂದರೆ ವಾಣಿವಿಲಾಸ ಮಾತ್ರ.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅದನ್ನು ಸದ್ಬಳಕೆ ಮಾಡಿಕೊಂಡು ರೈತರ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಮಾಡುವ ಪ್ರಯತ್ನವನ್ನು ಮಾಡದೇ ವ್ಯರ್ಥಮಾಡಿದೆ. ಹವಮಾನ ವೈಪರಿತ್ಯದಿಂದ ಮುಂದೆ ಮಳೆಯ ಪ್ರಮಾಣ ಕಡಿಮೆಯಾಗಬಹುದು ಎಂದು ಚಿಂತಿಸಿ ಅಂದಿನ ಬ್ರಿಟೀಷ್ ನೀರಾವರಿ ಎಂಜಿನಿಯರ್ ಥಾಮಸ್‍ಕಾಟನ್ 1880ರಲ್ಲಿ ನೀರಿನ ಸದ್ಭಳಕೆ ಮಾಡಿಕೊಳ್ಳಲು ನದಿಗಳ ಜೋಡಣೆ ಬಗ್ಗೆ ಯೋಜನೆ ಚಿಂತಿಸಿದ್ದರು. ಎಂಜಿನಿಯರ್ ಪರಮಶಿವಯ್ಯ ಸೇರಿದಂತೆ ಅನೇಕರು ಭವಿಷ್ಯದ ಹಿತ ದೃಷ್ಟಿಯಿಂದ ನೀರಿನ ಸಮಸ್ಯೆ ಬಗೆ ಹರಿಸಲು ಸರಕಾರಕ್ಕೆ ಸಲಹೆ ನೀಡಿದ್ದರು.
ಆದರೆ ಇದು ರೈತರಿಗೆ ಸಂಬಂಧಪಟ್ಟ ಸಮಸ್ಯೆಯಾಗಿರುವುದರಿಂದ ಸರಕಾರಗಳು ಗಂಭೀರ ಚಿಂತನೆ ನಡೆಸದೇ ನಿರ್ಲಕ್ಷಿಸಿರುವುದು ಖಂಡನೀಯ. ಆದರೆ ವಾಣಿ ವಿಲಾಸ ಸಾಗರ ನೀರು ಸಂಗ್ರಹಣೆ ಅನಿವಾರ್ಯವಾಗಿದ್ದು, ಪ್ರಸ್ತುತ ಸರಕಾರವು ಎರಡು ಟಿಎಂಸಿ ನೀರನ್ನು ಅಧಿಕೃತವಾಗಿ ನೀಡಿದೆ.
ಇನ್ನೂ 25 ಟಿಎಂಸಿಗಿಂತ ಅಧಿಕ ನೀರನ್ನು ವರದ, ಬೇಡ್ತಿ, ಅಘನಾಶಿನಿ, ನೇತ್ರಾವತಿ ನದಿಗಳನ್ನು ಜೋಡಿಸಿ ವಿವಿಸಾಗರಕ್ಕೆ ತಂದು ಜೀವ ಕಳೆ ತುಂಬುವಂತಾಗುತ್ತದೆ. ಈ ಯೋಜನೆಯಿಂದ 5 ತಾಲೂಕುಗಳ ಸಮಗ್ರ ನೀರಾವರಿ ಪ್ರಾಪ್ತಗೊಳ್ಳಲು ಸರಕಾರವು ವಿಳಂಭ ಮಾಡಿದೆ. ತ್ವರಿತ ಕ್ರಮ ಕೈಗೊಂಡು ರೈತರ ಅಭಿವೃದ್ಧಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಶಾಸಕರು ಹಾಗೂ ಸಂಸದರು ಕೈ ಜೋಡಿಸಿ ಸರಕಾರದ ಮೇಲೆ ಒತ್ತಡ ಹಾಕಿದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ನೀರಾವರಿ ತಜ್ಞ ತೋರಣಗಟ್ಟೆ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.