ಸುದ್ದಿವಿಜಯ, ಜಗಳೂರು: ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟಲು ರೋಗಬಾಧೆ ಹಿನ್ನೆಲೆ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮಸ್ಥರು ದೇವರ ಮೊರೆಹೋಗಿದ್ದು, ಶುಕ್ರವಾರ ಗೋಳಿಗೆಮ್ಮ ಹಬ್ಬವನ್ನು ಆಚರಿಸಿದರು.
ಬೆಳಗ್ಗೆಯಿಂದಲೇ ಎತ್ತು, ಹಸು, ಕರುಗಳನ್ನು ತೊಳೆದು ಪೂಜೆ ಸಲ್ಲಿಸಿದರು. ಹೋಳಿಗೆ ಅಮ್ಮನ ಪೂಜೆಗಾಗಿ ಮನೆಯಲ್ಲಿ ಮಹಿಳೆಯರು, ಯುವತಿಯರು ಬೆಳಗ್ಗೆಯಿಂದ ಉಪವಾಸವಿದ್ದು ನೇಮದಿಂದ ತಯಾರಿಸಿದ ಹೋಳಿಗೆ ತುಪ್ಪ, ಅನ್ನ ಮೊಸರು ಎಡೆಯೊಂದಿಗೆ ಅಡಕೆ ತಟ್ಟೆ ಅಥವಾ ಊಟದ ಎಲೆಗಳಲ್ಲಿ ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು,
ಅರಿಶಿಣ, ಕುಂಕುಮ, ಬಳೆ, ತೆಂಗಿನ ಕಾಯಿ, ಬಾಳೆಹಣ್ಣು ಅರ್ಪಿಸುವ ಮೂಲಕ ಅಮ್ಮನ ಪೂಜೆ ನೆರವೇರಿಸಿದರು. ನಂತರ ನಗರದ ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗದ ಈ ಆಚರಣೆಯನ್ನು ಸಾಂಕ್ರಾಮಿಕ ರೋಗಗಳು ತೊಲಗಿಸಲು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅಮ್ಮನನ್ನು ಬೇವಿನ ಸೊಪ್ಪು ಮುಚ್ಚಿ ಸಾಗಿಸುವುದರಿಂದ ಸೋಂಕುಗಳು ಸುಲಭವಾಗಿ ಪಸರಿಸುವುದಿಲ್ಲ ಎಂಬ ಪ್ರತೀತಿ ಕೂಡ ಇದೆ.
ಗ್ರಾಮದ ಮಾರಿಕಾಂಬ ದೇವಸ್ಥಾನದ ಮುಂಭಾಗ ಮನೆಗೊಬ್ಬರಂತೆ ಮೊರದಲ್ಲಿ ಎಡೆ ತೆಗೆದುಕೊಂಡು ಬಂದು ಸಾಲಾಗಿ ನಿಂತು ಒಮ್ಮೆಲೇ ನೂರಾರು ಕೊಟ್ಟೂರು ರಸ್ತೆಯ ಬೇವಿನ ಮರದಡಿಯಲ್ಲಿಟ್ಟು ಪೂಜೆ ಸಲ್ಲಿಸಿ ಮನೆಗೆ ಮರಳಿದರು.