ಸುದ್ದಿವಿಜಯ, ಜಗಳೂರು:ಅವರಿಬ್ಬರೂ ಮದುವೆಯಾಗಿ 11 ವರ್ಷ ಆಗಿತ್ತು, ಇಬ್ಬರ ದಾಂಪತ್ಯ ಜೀವನಕ್ಕೆ ಮುದ್ದಾದ ಎರಡು ಗಂಡು ಮಕ್ಕಳು ಸಾಕ್ಷಿಯಾಗಿದ್ದವು, ಆದರೆ ಇದ್ದಕ್ಕಿದ್ದಂತೆ ಆ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗಿಡಾಗಿದ್ದಾಳೆ, ಆ ಗೃಹಿಣಿ ಸಾವಿನ ಸುತ್ತ ಈಗ ಹಲವು ಅನುಮಾನಗಳು ಹುಟ್ಟಿವೆ, ಅಮ್ಮನನ್ನು ಕೊಂದಿದ್ದು ಇವನೇ ಅಂತ ಆ ಪುಟ್ಟ ಮಕ್ಕಳು ಜನ್ಮ ಕೊಟ್ಟ ತಂದೆಯತ್ತ ಬೊಟ್ಟು ಮಾಡುತ್ತಿವೆ…!
ಹೌದು ಜಗಳೂರು ತಾಲ್ಲೂಕಿನ ಗೌರಮ್ಮನಹಳ್ಳಿ ಗ್ರಾಮದ 30 ವರ್ಷದ ಶಾಂತಮ್ಮ ಎಂಬ ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಮಹಿಳೆ.
ಈಕೆ ಸಾವು ಮೊದಲಿಗೆ ಆತ್ಮಹತ್ಯೆ ಸ್ವರೂಪ ಪಡೆದುಕೊಂಡಿತ್ತು, ನಂತರ ಸ್ವತಃ ಮಕ್ಕಳೆ ತಂದೆಯ ವಿರುದ್ಧ ಗಂಭೀರ ಆರೋಪ ಮಾಡಿದ ಪರಿಣಾಮವಾಗಿ ಗೃಹಿಣಿ ಸಾವು ಮತ್ತೊಂದು ಸ್ವರೂಪ ಪಡೆದುಕೊಂಡಿದೆ.
ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಗೃಹಿಣಿ ಸಾವು, ತನ್ನ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದಾರೆಂದು ಆರೋಪ ಮಾಡುತ್ತಿರುವ ಪುಟ್ಟ ಮಕ್ಕಳು, ನಮಗೆ ನ್ಯಾಯ ಬೇಕೇ ಬೇಕು ಎನ್ನುತ್ತಿರುವ ಕುಟುಂಬಸ್ಥರು.
ಹೌದು, ಈ ಘಟನೆ ಕಂಡು ಬಂದಿದ್ದು ಬೆಣ್ಣೆ ನಗರಿ ದಾವಣಗೆರೆ ಪಟ್ಟಣದಲ್ಲಿರುವ ಸಿಜೆ ಆಸ್ಪತ್ರೆ ಶವಾಗಾರದ ಮುಂದೆ.
ತಂದೆ ನಿತ್ಯವೂ ಕುಡಿದು ಬಂದು ಅಮ್ಮನ ಜೊತೆ ಜಗಳವಾಡ್ತಿದ್ದರು. ರಾಡ್ ನಿಂದ ತಲೆಗೆ ಹೊಡೆದು ತಾಯಿಯನ್ನು ತಂದೆಯೇ ಕೊಂದು ಹಾಕಿದ್ದಾರೆ ಎಂದು ಆತನ ಪುತ್ರ ಜಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಜಿಲ್ಲಾಸ್ಪತ್ರೆಯ ಶವಗಾರದ ಬಳಿ ಮೃತ ಶಾಂತಮ್ಮನ ಪೋಷಕರು ಗಂಡನ ಮನೆಯವರ ವಿರುದ್ದ ಕೊಲೆ ಆರೋಪ ಮಾಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮಶೇಖರ್ ಕೊಲೆ ಆರೋಪಿಯಾಗಿದ್ದು, ಶಾಂತಮ್ಮನ ಜತೆ ಕಳೆದ 11 ವರ್ಷದ ಹಿಂದೆ ವಿವಾಹವಾಗಿತ್ತು, ಇಬ್ಬರ ದಾಂಪತ್ಯ ಜೀವನಕ್ಕೆ ಮುದ್ದಾದ ಎರಡು ಗಂಡು ಮಕ್ಕಳಿದ್ದಾರೆ.
ಬಡತನವಿದ್ದರು ಶಾಂತಮ್ಮ ಮಕ್ಕಳನ್ನು ಚನ್ನಾಗಿ ಸಾಕುತ್ತಿದ್ದಳು, ಗಂಡ ಸೋಮಶೇಖರ್ ಪ್ರತಿನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದನಂತೆ.
ಅಲ್ಲದೆ ಅವರ ಮನೆಯವರು ಕೂಡ ಕಿರುಕುಳ ನೀಡುತ್ತಿದ್ದರಂತೆ.
ಕೂಲಿ ನಾಲಿ ಮಾಡುತ್ತಿದ್ದ ಶಾಂತಮ್ಮ ಬಾತ್ ರೂಂ ಕಟ್ಟಲು ಬಂಡೆಗಳನ್ನು ತಂದಿದ್ದಾಳೆ, ಎಣ್ಣೆ ದಾಸನಾಗಿದ್ದ ಸೋಮಶೇಖರ್ ಬಂಡೆಗಳನ್ನು ಮಾರಿ ಕುಡಿದಿದ್ದಾನೆ.
ಇದರಿಂದ ಮನೆಯಲ್ಲಿ ಇಬ್ಬರ ನಡುವೆ ಜಗಳವಾಗಿದೆ ಆಗ ವಿಷ ಕುಡಿಸಿ ಕೊಲೆ ಮಾಡಿದ್ದಾನೆ, ಯಾರಿಗೂ ಅನುಮಾನ ಬಾರದ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದಾನೆಂದು ಮೃತ ಶಾಂತಮ್ಮನ ತವರು ಮನೆಯವರು ಆರೋಪ ಮಾಡಿದ್ದಾರೆ.
ಈಗಾಗಲೇ ಶಾಂತಮ್ಮನ ಗಂಡ ಸೋಮಶೇಖರ್ ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ, ಇನ್ನೊಂದೆಡೆ ಈ ಚಿಕ್ಕ ಮಕ್ಕಳಿಗೆ ಆಸರೆ ಯಾರು ಎಂಬ ಪ್ರಶ್ನೆ ಹುಟ್ಟಿದೆ.
ಒಟ್ಟಾರೆ ಮೃತ ಶಾಂತಮ್ಮನ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿದ್ದು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ