ಸುದ್ದಿವಿಜಯ, ಜಗಳೂರು: ಏಷ್ಯದಲ್ಲಿಯೇ ಅಪರೂಪ ಕೊಂಡುಕುರಿ ಇರುವ ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶವನ್ನು ರಕ್ಷಿಸಿ ಪ್ರವಾಸ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ಒತ್ತು ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು. ಜಿಲ್ಲಾ ನಗರಾಭಿವೃದ್ದಿ ಕೋಶ ದಾವಣಗೆರೆ, ಪಟ್ಟಣ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದಲ್ಲಿ ಗುರುವಾರ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಸಮ್ಮೇಳನ ಮತ್ತು ಶ್ರಮದಾನ ಕಾರ್ಯಕ್ರಮ ಹಾಗೂ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕುರುಚಲು ಕಾಡಿನಿಂದ ಕೂಡಿರುವ ಕೊಂಡುಕುರಿ ವನ್ಯಜೀವಿ ಪ್ರದೇಶ ನೋಡಲು ತುಂಬ ಸುಂದರವಾಗಿ ಕಾಣುತ್ತದೆ. ಈ ಸ್ಥಳವನ್ನು ನೋಡಲು ಅನೇಕರು ಪ್ರವಾಸ ಬರುತ್ತಿದ್ದಾರೆ. ಅಪರೂಪದ ಕೊಂಡುಕುರಿ ಪ್ರಾಣಿಯನ್ನು ರಕ್ಷಿಸಿ ಪ್ರವಾಸ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ಒತ್ತು ನೀಡುತ್ತೇನೆ ಎಂದರು.
ಬರದ ತಾಲೂಕು ಎಂಬ ಕಳಂಕ ತೊಲಗಿಸಿ ಹಸಿರು ಮತ್ತು ಸ್ವಚ್ಛ ಸುಂದರವಾದ ಪ್ರದೇಶ ರೂಪಿಸಲು ಎಲ್ಲರು ಕಂಕಣಬದ್ದರಾಗಬೇಕು. ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ ಎಂಬ ದ್ಯೇಯದೊಂದಿಗೆ ಸ್ವಚ್ಛಪರಿಸದ ನಿರ್ಮಾಣಕ್ಕೆ ಎಲ್ಲರು ದೃಢಸಂಕಲ್ಪ ಮಾಡಿದರೆ ಇಡೀ ಭಾರತವನ್ನೇ ಶುಚಿಗೊಳಿಸಲು ಸಾಧ್ಯ ಎಂದರು.
ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಲಕ್ಷ್ಮೀಕಾಂತ್ ಭೂಮಿಯ ಮೇಲೆ ನೀರು ತುಂಬ ಮುಖ್ಯವಾಗಿದೆ. ಜೀವನ ನಡೆಯುವುದು ನೀರಿನಿಂದಲೇ ನಾಶವು ನೀರಿನಿಂದಲೆ ಹಾಗಾಗಿ ನೀರಿನ ಬಗ್ಗೆ ಅರಿವು ಮೂಡಿಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆ, ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆಯೂ ಪರಿಸರಕ್ಕೆ ತುಂಬ ಅಪಾಯಕಾರಿಯಾಗಿದೆ. ಅತಿಯಾಗಿ ಉಪಯೋಗಿಸುವುದರಿಂದ ಕ್ಯಾನ್ಸರ್‍ನಂತ ಮಾರಕ ರೋಗಗಳು ಹರಡುತ್ತವೆ. ಚಿಕ್ಕ ಮಕ್ಕಳಿಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಿಸಿಯಾದ ಊಟ ಪಾರ್ಸಲ್ ಕಟ್ಟುವುದು ನಿಲ್ಲಿಸಬೇಕು, ಇಲ್ಲದಿದ್ದರೆ ಮಕ್ಕಳ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಸಿ,ಎಸ್ಟಿ ಜನಜಾಗೃತಿ ಸಮಿತಿಯ ಪಿ.ಎಸ್ ಅರವಿಂದ್, ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ, ಕಸಾಪ ಅಧ್ಯಕ್ಷೆ ಸುಜಾತ, ಗೀತಾಮಂಜು, ಗೌರಮ್ಮ, ಪ.ಪಂ ಸದಸ್ಯ ರಮೇಶ್, ಆರೋಗ್ಯ ನಿರೀಕ್ಷಕ ಕಿಫಾಯಿತ್, ಮುಖಂಡರಾದ ಕುರಿ ಜಯ್ಯಣ್ಣ, ಅಹಮದ್ ಅಲಿ, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಮತ್ತಿತರಿದ್ದರು.