ಸುದ್ದಿವಿಜಯ, ಜಗಳೂರು: ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ.ನಂದಿಲಿಂಗೇಶ್ವರ ಕರ್ತವ್ಯಕ್ಕೆ ಸರಿಯಾಗಿ ಬಾರದ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ತಕ್ಷಣವೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಗ್ರಾಪಂ ಸರ್ವ ಸದಸ್ಯರು ನೂತನ ತಾಪಂ ಇಓ ಕೆ.ಟಿ.ಕರಿಬಸಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಮ್ಮ ಮಾತನಾಡಿ, ಪಿಡಿಒ ನಂದಿಲಿಂಗೇಶ್ವರ ನಮ್ಮ ಪಂಚಾಯಿತಿಗೆ ನಿಯೋಜನೆಗೊಂಡದಿನದಿಂದಲೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಎನ್‍ಆರ್‍ಇಜಿ, ಬೀದಿ ದೀಪ, ಸ್ವಚ್ಛತೆ, ಕುಡಿಯುವ ನೀರು, ಮೂಲಸೌಕರ್ಯ ಯಾವುದಕ್ಕೂ ಗಮನ ಕೊಡುತ್ತಿಲ್ಲ.ಕೆಚ್ಚೇನಹಳ್ಳಿ ಗ್ರಾಪಂ ಪಿಡಿಒ ಎಸ್.ಎಂ.ನಂದಿಲಿಂಗೇಶ್ವರ್ ವರ್ಗಾವಣೆಗೆ ಗ್ರಾಪಂ ಅಧ್ಯಕ್ಷರು ಸದಸ್ಯರು ಇಒ ಕೆ.ಟಿ.ಕರಿಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.
ಇ-ಸ್ವತ್ತುಗಳಿಗೆ ಸಾರ್ವಜನಿಕರಿಂದ ಹತ್ತು ಸಾವಿರದಿಂದ 50 ಸಾವಿರ ರೂ ವರೆಗೆ ವಸೂಲಿ ಮಾಡುತ್ತಾರೆ. ಸಾರ್ವಜನಿಕರಿಗೆ ಯಾವುದೇ ರಸೀದಿ ನೀಡದೇ ಹಣ ವಸೂಲಿ ಮಾಡುತ್ತಾರೆ. ಸುಳ್ಳು ಸಬೂಬು ಹೇಳುತ್ತಾ ರಜೆಯೂ ಹಾಕದೇ ವಾರಗಟ್ಟೆಲೆ ಪಂಚಾಯಿತಿಗೆ ಬಾರದೇ ಸರಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಾರಕ್ಕೆ ಒಂದು ದಿನ ಬಂದು ಹಾಜರಾತಿ ಪುಸ್ತಕಕ್ಕೆ ಒಂದೇ ದಿನ ಸಹಿ ಮಾಡುತ್ತಾರೆ. ಪಿಡಿಒ ಕಚೇರಿಗೆ ಬರುವುದು ಗೊತ್ತಾಗುವುದಿಲ್ಲ. ಅವರಿಗೆ ತಿಳಿದ ಸಮಯಕ್ಕೆ ಬರುತ್ತಾರೆ. ಕೇಳಿದರೆ ಮೀಟಿಂಗ್ ನೆಪ ಹೇಳುತ್ತಾರೆ ಎಂದು ಕಿಲಾಕಣ್ವಕುಪ್ಪೆ ಗ್ರಾಮದ ಸದಸ್ಯ ಟಿ.ಸಣ್ಣಓಬಯ್ಯ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ತವ್ಯ ನಿರ್ವಹಿಸದೇ ಸಂಬಳ ಪಡೆಯುತ್ತಿರುವ ಪಿಡಿಒ ನಂದಿಲಿಂಗೇಶ್ವರ್ ಅವರನ್ನು ವರ್ಗಾವಣೆ ಮಾಡಿ ಅಭಿವೃದ್ಧಿ ಕೆಲಸ ಮಾಡುವ ಪಿಡಿಒ ನಿಯೋಜನೆ ಮಾಡಿ ಎಂದು ಸದಸ್ಯರಾದ ಸರೋಜಮ್ಮ, ಬಿ.ಎಸ್.ಸುಷ್ಮಾಸ್ವರಾಜ್, ಸುಲೋಚನಾ ಹನುಮಂತಪ್ಪ, ಹನುಮಂತಮ್ಮ, ಬೊಮ್ಮಕ್ಕ, ಬಸಪ್ಪ, ಎಂ.ಓಬಳೇಶ್, ಉಪಾಧ್ಯಕ್ಷರಾದ ಸುಧಾಮಣಿಕಾಟಪ್ಪ ಸೇರಿದಂತೆ ಅನೇಕ ಸದಸ್ಯರು ಇಓ ಕೆ.ಟಿ.ಕರಿಬಸಪ್ಪ ಅವರಿಗೆ ದೂರು ನೀಡಿದರು.
ಪಿಡಿಒಗೆ ನೋಟಿಸ್ ನೀಡಿದ ಇಓ
ಕರ್ತವ್ಯಕ್ಕೆ ಗೈರು ಹಾಜರಿ ಹಿನ್ನೆಲೆ ಕೆಚ್ಚೇನಹಳ್ಳಿ ಪಿಡಿಒ ಎಸ್.ಎಂ.ನಂದಿಲಿಂಗೇಶ್ವರ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಾಲೂಕು ಪಂಚಾಯಿತಿ ನೂತನ ಇಒ ಕೆ.ಟಿ.ಕರಿಬಸಪ್ಪ ಸುದ್ದಿವಿಜಯ ವೆಬ್ ನ್ಯೂಸ್‍ಗೆ ಪ್ರತಿಕ್ರಿಯೆ ನೀಡಿದರು.