ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಪ್ರಚಂಡ ಗೆಲುವು!

Suddivijaya
Suddivijaya August 6, 2022
Updated 2022/08/06 at 2:54 PM

ಸುದ್ದಿ ವಿಜಯ, ನವದೆಹಲಿ:ಉಪರಾಷ್ಟ್ರಪತಿ ಚುನಾವಣೆ ಶನಿವಾರ ನಡೆದು ಫಲಿತಾಂಶ ಪ್ರಕಟವಾಗಿದ್ದು, ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನ್ಕರ್‌ ನಿರೀಕ್ಷಿತ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ 71 ರ ಹರೆಯದ ಜಗದೀಪ್‌ ಧನ್ಕರ್‌ ವಿರುದ್ಧ ಪ್ರತಿಪಕ್ಷಗಳ ಕಡೆಯಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್‌ ನಾಯಕಿ ಕರ್ನಾಟಕದ ಮಾರ್ಗರೇಟ್‌ ಆಳ್ವ ಅವರು ಸೋಲು ಅನುಭವಿಸಿದ್ದಾರೆ.

ಚಲಾವಣೆಯಾದ 725 ಮತಗಳ ಪೈಕಿ ಜಗದೀಪ್ ಧನ್ಕರ್ 500ಕ್ಕೂ ಹೆಚ್ಚು ಮತಗಳನ್ನು ಪಡೆದು ಜಯಗಳಿಸಿದ್ದು, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ 200ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಣಿಕೆ ನಂತರ 15 ಮತ ಅಸಿಂಧು ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 55 ಸಂಸದರು ಮತದಾನ ಮಾದಿರಲಿಲ್ಲ.
ಇದೇ 11ಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅವಧಿ ಅಂತ್ಯವಾಗಲಿದೆ.

ಚುನಾವಣೆಯಲ್ಲಿ ಕೇವಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮಾತ್ರ ಮತ ಹಾಕಲು ಅವಕಾಶವಿದ್ದುದರಿಂದ ಧನ್ಕರ್‌ ಅವರ ಗೆಲುವು ಖಾತ್ರಿಯಾಗಿತ್ತು.ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಎನ್‌ಡಿಎ ಹೆಚ್ಚು ಸ್ಥಾನಗಳನ್ನ ಹೊಂದಿದೆ.

ಲೋಕಸಭೆಯಲ್ಲಿ 36 ಸಂಸದರನ್ನು ಹೊಂದಿರುವ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಪಕ್ಷ, ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗುಳಿದಿತ್ತು. ಆಮ್‌ ಆದ್ಮಿ ಪಾರ್ಟಿ ಮತ್ತು ಜೆಎಂಎಂ ಪ್ರತಿಪಕ್ಷ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದವು.
ಬಿಜೆಪಿಯ 394 ಸೇರಿದಂತೆ ಎನ್‌ಡಿಎ 441 ಸಂಸದರನ್ನು ಹೊಂದಿದೆ. ಐವರು ನಾಮನಿರ್ದೇಶಿತ ಸದಸ್ಯರು ಕೂಡ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.

ಎನ್‌ಡಿಎಯೇತರ ಹಲವಾರು ಪಕ್ಷಗಳೂ ಧನ್ಕರ್ ಅವರನ್ನು ಬೆಂಬಲಿಸಿದ್ದರು. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ, ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ, ಅಕಾಲಿದಳ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಬಣ ಸೇರಿ ಒಟ್ಟು 81 ಸಂಸದರ ಬೆಂಬಲ ದೊರಕಿತ್ತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!