Suddivijaya|Kannada News | 07-04-2023
ಸುದ್ದಿವಿಜಯ,ಜಗಳೂರು:ತಾಲೂಕಿನ ದೊಣೆಹಳ್ಳಿ ಗ್ರಾಮದ ಆರಾಧ್ಯ ದೈವ ಮಹಾ ಮಹಿಮ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವವು ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಮುಂಜಾನೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ,ವಿಧಿ, ವಿಧಾನ ಕೈಂಕರ್ಯಗಳು ನಡೆದವು.
ಬೆಳಗ್ಗೆ ಚಿಕ್ಕ ರಥೋತ್ಸವ ನಡೆಯಿತು. ನಂತರ ಸಂಜೆ ರಥಕ್ಕೆ ಬಲಿ ಅನ್ನ ಸೇವೆ ಪೂರ್ಣಗೊಂಡ ನಂತರ ವಿಶೇಷ ಹೂವುಗಳಿಂದ ಅಲಂಕೃತಗೊಂಡ ಮಹಾ ರಥದ ಒಳಗೆ ಬಸವೇಶ್ವರ ಸ್ವಾಮಿಯನ್ನು ಮೂರು ಬಾರಿ ಪ್ರದಕ್ಷಣೆ ನಡೆಸಿ, ರಥದಲ್ಲಿ ಕೂರಿಸಲಾಯಿತು.
ನಂತರ ಮುಕ್ತಿ ಭಾವುಟ ಹೂವಿನ ಹಾರಗಳನ್ನು ಹರಾಜು ನಡೆಸಲಾಯಿತು. ದೊಣೆಹಳ್ಳಿ ವಾಮಣ್ಣ ಸ್ವಾಮಿಯವರ ಮಗ ಬಸವರಾಜಯ್ಯ ನವರು 75000 ರೂ.ಗಳಿಗೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆದುಕೊಂಡರು. ಸಾವಿರಾರು ಭಕ್ತರ ಜಯಘೋಷ ಗಳೊಂದಿಗೆ ಸಂಜೆ 6:06 ಕ್ಕೆ ಪ್ರಾರಂಭಗೊಂಡ ರಥ, ಗ್ರಾಮದ ಮಧ್ಯೆ ಪಾದಗಟ್ಟೆಯ ಕಡೆಗೆ ಸಾಗಿ, ರಾತ್ರಿ 7:15 ಕ್ಕೆ ಸ್ವಸ್ಥಾನಕ್ಕೆ ಮರಳಿತು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ನೆಲೆಸಿರುವ ಗ್ರಾಮದ ಜನತೆ ವರ್ಷಕ್ಕೊಮ್ಮೆ ರಥೋತ್ಸವದಲ್ಲಿ ಒಟ್ಟಿಗೆ ಸೇರಿ ತೇರು ಎಳೆದು ಸಂಭ್ರಮಿಸಿದರು.
ಊರಿನ ಉತ್ಸಾಹಿ ಯುವಕರು ರಥವನ್ನ ವಿವಿಧ ಬಗೆಯ ಹೂವುಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿ, ರಥಕ್ಕೆ ಮೆರಗು ಹೆಚ್ಚಿಸಿದರು. ಗ್ರಾಮದ ಹಿರಿಯರು, ಮುಖಂಡರು, ರಾಜಕೀಯ ನಾಯಕರು, ಪತ್ರಕರ್ತರು, ಅಕ್ಕಪಕ್ಕಗಳ ಗ್ರಾಮಗಳು ಸೇರಿದಂತೆ ದೊಣೆಹಳ್ಳಿಯ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.