Suddivijaya|Kannada News|05-04-2023
ಸುದ್ದಿವಿಜಯ,ಜಗಳೂರು: ಪ್ರಥಮ ವರ್ಷದ ಹನುಮ ಜಯಂತಿ ಮಹೋತ್ಸವ ಅಂಗವಾಗಿ ಬುಧವಾರ ಶ್ರೀ ಹನುಮ ಸೇವಾ ಸಮಿತಿ ವತಿಯಿಂದ ಸಾವಿರಾರು ಮಾಲಾಧಾರಿಗಳು ಬೃಹತ್ ಸಂಕೀರ್ತನಾ ಶೋಭಾ ಯಾತ್ರೆ ನಡೆಸಿದರು.
ಜಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಬೆಳಗ್ಗೆ ಆರಂಭವಾದ ಶೋಭಾ ಯಾತ್ರೆಯಲ್ಲಿ ಪ್ರತಿಯೊಬ್ಬರು ಬಿಳಿ ಶರ್ಟ್, ಕೇಸರಿ ಟವೆಲ್, ಪಂಚೆ ತೊಟ್ಟಿದ್ದ ಮಾಲಾಧಾರಿಗಳು ಗಮನ ಸೆಳೆದರು.
ಹೊಸ ಬಸ್ ನಿಲ್ದಾಣ, ಡಾ. ರಾಜ್‌ಕುಮಾರ್ ರಸ್ತೆ, ಹಳೆ ಮಹಾತ್ಮಗಾಂಧಿ ವೃತ್ತ, ನೆಹರು ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಾಗಿದ ಶೋಭಾ ಯಾತ್ರೆ ಮಧ್ಯಾಹ್ನ ಹೊರಕೆರೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿತು.
ದಾರಿಯುದ್ದಕ್ಕೂ ಮಾಲಾಧಾರಿಗಳಿಂದ ಜೈ ಶ್ರೀರಾಮ್, ಜೈ ಹನುಮ, ಜೈ ಆಂಜನೇಯ ಎಂಬ ಘೋಷಣೆಗಳು ಮೊಳಗಿದವು. ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಜಗಳೂರು ತಾಲೂಕು ಸಂತೇಮುದ್ದಾಪುರ ಗ್ರಾಮದಲ್ಲಿ ಬೇಡಿ ಸಂಜೀವ ಮೂರ್ತಿ ಪತ್ತೆಯಾಗಿದ್ದು, ರಾಜ್ಯದಲ್ಲಿಯೇ ಅಪರೂಪ ವಿಗ್ರಹವಾಗಿದೆ. ಇದು ಬೇಡಿ ಹಾಕಿದ ರೂಪದಲ್ಲಿದೆ. ಆದ್ದರಿಂದ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಯುವ ಸಮೂಹ ಮುಂದಾಗಿದೆ. ಆದರೆ ನೀತಿ ಸಂಹಿತೆ ಇರುವುದರಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ದೇವಿಕೆರೆ ಶಿವಕುಮಾರ್‌ಸ್ವಾಮಿ, ಬಿದರಕೆರೆ ಪ್ರಕಾಶ್,ಮರುಳಾರಾಧ್ಯ,ಮಿಲ್ಟ್ರಿತಿಪ್ಪೇಸ್ವಾಮಿ, ಜೆ.ವಿ ನಾಗರಾಜ್, ಹುಲಿಕುಂಠ ಶ್ರೇಷ್ಠಿ, ಅರವಿಂದ್, ಬಿಸ್ತುವಳ್ಳಿ ಬಾಬು, ಡಾ. ರವಿಕುಮಾರ್, ಪ.ಪಂ ಸದಸ್ಯ ಪಾಪಲಿಂಗಪ್ಪ ಸೇರಿದಂತೆ ಮತ್ತಿತರಿದ್ದರು.