ಸುದ್ದಿವಿಜಯ, ಜಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಏಕೆ ಅರ್ಜಿ ಸಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಪ್ರಶ್ನಿಸಿದರು.
ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಸರಕಾರದಿಂದ ಬರುವ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಬುದ್ಧ ಯೋಜನೆ ಅಡಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ವಿದೇಶಗಳ ವಿವಿಯಲ್ಲಿ ಓದುವ ಹಂಬಲವಿರುವ ಎಸ್.ಸಿ,ಎಸ್‍ಟಿ ಸೇರಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸರಕಾರವೇ ಸಂಪೂರ್ಣ ಖರ್ಚು ವೆಚ್ಚ ಭರಿಸಲಿದೆ.
ವಿದೇಶಕ್ಕೆ ತರೆಳಲು ವಿಮಾನ ಟಿಕೆಟ್, ವಿಸಾ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಆದರೆ ಈ ಸ್ಕೀಂ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ. ದಯಮಾಡಿ ತಿಳಿದುಕೊಳ್ಳಿ, ನಿಮ್ಮ ಪೋಷಕರಿಗೆ ಹೊರೆಯಾಗದಂತೆ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಆಸೆ ಇದ್ದವರು ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.
ಸಮಾಜ ಕಲ್ಯಾಣ ಇಲಾಖೆ ಸದಾ ನಿಮ್ಮ ಸೇವೆಗೆ ಬದ್ಧವಾಗಿದೆ. ಪದವಿ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ಸ್ಕಾಲರ್ ಶಿಪ್ ಬರುತ್ತದೆ. ಅದಕ್ಕು ಅನೇಕರು ಅರ್ಜಿ ಹಾಕಿಲ್ಲ. ನಿಮ್ಮ ಸಮಯವನ್ನು ವ್ಯರ್ಥ ಮಾಡದೇ ಸರಕಾರದ ಸೌಲಭ್ಯ ಪಡೆದುಕೊಳ್ಳಿ ಎಂದರು. 2021-22ನೇ ಸಾಲಿನಲ್ಲಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಆನ್‍ಲೈನ್ ನಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡಿದ ಕಾಲೇಜು ಪ್ರಾಂಶುಪಾಲರಿಂದ ದೃಢೀಕರಿಸಿ ನಂತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮುಧೋಳದ ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸಬೇಕು.
ಇದೇ ಡಿ.31 ರವರೆಗೆ ಅರ್ಜಿಸಲ್ಲಿಕೆಗೆ ಅವಕಾಶವಿದ್ದು ಪ್ರತಿಕಾಲೇಜುಗಳಿಗೆ ಹೋಗಿ ಅಭಿಯಾನ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಳ್ಳಿ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಲೋಕರಾಜ್, ಸಹಾಯಕ ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ, ಬಿ.ಕೆ.ಬಸವರಾಜ್, ಉಪನ್ಯಾಸಕರಾದ ವಿದ್ಯಾಶ್ರೀ, ವೆಂಕಟೇಶ್, ಬಸವರಾಜ್, ಅಂಬರೀಷ್, ಪ್ರಸಾದ್, ಸಲ್ಮಾತಾಜ್, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಅಶೋಕ್ ಸೇರಿದಂತೆ ಅನೇಕರು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಮಾನದಂಡಗಳ ಬಗ್ಗೆ ಅರಿವು ಮೂಡಿಸಿದರು.