‘ನೀನೊಲಿದರೆ ಕೊರಡು ಕೊನರುವುದಯ್ಯ’… ಬಡತನದಿಂದ ಬಸವಳಿದ ಮಗುವಿಗೆ ಒಲಿದ ದೇವರು!

Suddivijaya
Suddivijaya August 7, 2023
Updated 2023/08/07 at 3:44 PM

ಸುದ್ದಿವಿಜಯ, ವಿಶೇಷ ವರದಿ: ದೇವರು ಎಂಬುವವನು ಯಾರ ಪಾಲಿಗೆ ಯಾವಾಗ, ಯಾವ ರೂಪದಲ್ಲಿ ಒಲಿದು ಬರುವನೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅದಕ್ಕಾಗಿಯೇ 12ನೇ ಶತಮಾನದಲ್ಲಿ ಬಸವಣ್ಣನವರು ‘ನೀನೊಲಿದರೆ ಕೊರಡು ಕೊನರುವುದಯ್ಯ’… ಎಂದು ವಚನ ರಚಿಸಿದ್ದು. ದೇವರಿದ್ದಾನೆ ಆದರೆ ಯಾರ ರೂಪದಲ್ಲಿದ್ದಾನೆ ಎಂಬುದಕ್ಕೆ ಈ ಒಂದು ಘಟನೆ 2016 ರಲ್ಲಿ ನಡೆಯಿತು.

ಕಗ್ಗತ್ತಲೆಯ ಕೂಪದಲ್ಲಿ, ಬಡತನದ ಬೇಗೆಯಲ್ಲಿ, ಹಸಿವಿನ ಸಂಕಟದಲ್ಲಿ, ದಾಹದ ಹಾಹಾಕಾರದಲ್ಲಿ ಬಳಲಿ ಬಸವಳಿದು ಬೆಂಡಾಗಿ ಎಲುಬಿನ ಗೂಡಿನಂತಾಗಿದ್ದ ಮಗುವಿನ ಪಾಲಿಗೆ ಅಂದು ದೇವತೆಯಂತೆ ಒಲಿದು ಬಂದಿದ್ದು ಇದೇ ‘ಅಂಜಾ ರಿಂಗಾರಿನ್’!

ಚಾರಿಟಬಲ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಅಂದು ನೈಜೀರಿಯಾ ದೇಶದಲ್ಲಿ ಪ್ರವಾಸ ಮಾಡುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಈ ಮಗುವಿನ ಸ್ಥಿತಿ ನೋಡಿ ಹೆಣ್ಮನ ಕರಗಿಬಿಟ್ಟಿತ್ತು. ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ದಿಕ್ಕೆಟ್ಟು ರಸ್ತೆಯಲ್ಲಿ ಅಲೆಯುತ್ತಿದ್ದ ಮಗುವನ್ನು ನೋಡಿದಾಕೆಗೆ ಹೃದಯ ತುಂಬಿ ಬಂದಿತ್ತು.

ಮಗುವನ್ನು ನೋಡಿದ ತಕ್ಷಣ ಕೈಯಲ್ಲೊಂದು ನೀರಿನ ಬಾಟಲಿ, ಬಿಸ್ಕೇಟಿನ ಪ್ಯಾಕೆಟ್ ಹಿಡಿದು ಆ ಮಗುವಿನತ್ತ ಆಕೆ ಹೆಜ್ಜೆ ಹಾಕುತ್ತಿದ್ದರೆ.. ಯಾರೋ ದೇವತೆಯೊಬ್ಬಳು ನನ್ನತ್ತ ಬರುತ್ತಿದ್ದಾಳೆ ಎಂಬ ಭರವಸೆ ಆ ಮಗುವಿಗೆ.

ಹೊಟ್ಟೆಯಲ್ಲಿ ಹಸಿವಿನ ಬೆಂಕಿಯನ್ನಿಟ್ಟುಕೊಂಡಿದ್ದ ಮಗುವಿನ ಗಂಟಲಲ್ಲಿ ನೀರಿಳಿದ ತಕ್ಷಣ ಬೆಂಕಿ ಆರಿ ಹೋಗಿ ದಾಹ ತಣಿಸಿ ಕಾಣದ ಯಾವುದೋ ಒಂದು ಆನಂದವಾಗಿರಬೇಕು ಆ ಮಗುವಿಗೆ.

ಮಗುವಿನ ನಿತ್ರಾಣ ಸ್ಥಿತಿಯ ಕಂಡು ಅಂಜಾ ಮನಸಿಗೆ ಅದೇನನಿಸಿತೋ, ನೀರುಣಿಸಿ ತನ್ನ ದಾರಿ ಹಿಡಿಯದ ಅಂಜಾ ಆ ಮಗುವನ್ನು ದತ್ತು ಪಡೆದು ತನ್ನ ಟ್ರಸ್ಟಿನ ಮೂಲಕ ಅಗತ್ಯ ಚಿಕಿತ್ಸೆ ಒದಗಿಸಿದಳು. ನಂತರ ಅದಕ್ಕೆ “ಹೋಪ್” ಅಂದರೆ ಭರವಸೆ ಎಂಬ ಹೆಸರಿಟ್ಟಳು.

ಅಂದು ಅಪೌಷ್ಟಕತೆಯಿಂದ ಬಳಲಿ ಎಲುಬಿನ ಗೂಡಾಗಿದ್ದ ಮಗುವನ್ನು ಮುಂದೆ ಒಬ್ಬ ಸದೃಢ ಅಥ್ಲೀಟ್ ಆಗಿ ಕಾಣುವ ಭರವಸೆಯೊಂದಿಗೆ ತನ್ನ ಜೊತೆಯಲ್ಲಿರಿಕೊಂಡು ಸಾಕಿ ಸಲಹುತ್ತಿದ್ದಾಳೆ ಅಂಜಾ.

ಮಗುವಿಗೆ ನೀರುಣಿಸುವ ದೃಶ್ಯ ಅದೆಷ್ಟು ಜನರ ಮನ ಕಲಕಿತೋ ಏನೋ… ಸಾಮಾಜಿಕ ಜಾಲತಾಣಗಳು, ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ನೀರುಣಿಸುವ ಆ ಒಂದು ದೃಶ್ಯ ಮಗುವಿನ ಪಾಲಿಗೆ ಒಂದು ಚರಿತ್ರೆಯನ್ನೇ ಸೃಷ್ಟಿಸಿಬಿಟ್ಟಿತ್ತು.

ವಿಶ್ವಸಂಸ್ಥೆಯಲ್ಲಿ ಆ ದೃಶ್ಯದ ಭೀಕರತೆಯ ಬಗ್ಗೆ ಚರ್ಚೆಯಾಯಿತು. ಆಫ್ರಿಕಾ ಖಂಡದ ಬಡರಾಷ್ಟ್ರಗಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆಯ ಪರಿಹಾರಕ್ಕಾಗಿ ಹತ್ತು ಹಲವಾರು ಯೋಜನೆಗಳಿಗೆ ನಾಂದಿಯಾಯಿತು.

ಟಿವಿಯಲ್ಲಿ ನೋಡಿದ ಅದ್ಯಾವುದೋ ದೃಶ್ಯ ಇಂದು ನಡೆದು ಹೋದ ಈ ಘಟನೆಯನ್ನು ಮತ್ತೆ ನೆನಪಿಸಿತು. ಈಗ ಹೇಗಿದ್ದಾನೆ ಆ ಹುಡುಗ ನೋಡೋಣವೆಂದು ಗೂಗಲ್ ಹೊಕ್ಕಾಗ ಸಿಕ್ಕಿದ್ದು ಮರುಜೀವ ಪಡೆದು ಮುಗುಳುನಗೆಯೊಂದಿಗೆ ಮನಸೂರೆಗೊಳ್ಳುತ್ತಿರುವ “ಹೋಪ್” (ಭರವಸೆ)

ಸಣ್ಣ ಸಣ್ಣ ಘಟನೆಗಳೇ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತವೆ.. ಭಗವಂತ ಇನ್ನೊಬ್ಬರ ಕಷ್ಟಕ್ಕೆ ನೆರವಾಗುವ ಶಕ್ತಿಯನ್ನು ನಮಗೆ ಕೊಟ್ಟಿದ್ದಾನೋ ಇಲ್ಲವೋ ಎಂಬುದನ್ನು ಕಾಲ ನಿರ್ಧರಿಸಲಿ. ಸಾಧ್ಯವಾದರೆ ಅಲ್ಲಿಯವರೆಗೂ ಮಿಡಿಯುವ ಮನಸುಗಳನ್ನು ಪೆÇ್ರೀತ್ಸಾಹಿಸಿ ಮತ್ತಷ್ಟು ಸತ್ಕಾರ್ಯಗಳಿಗೆ ಶಕ್ತಿ ತುಂಬೋಣ.

ಲೇಖಕರು-
ಹೇಮಂತ್ ಚಿನ್ನು

Share this Article
Leave a comment

Leave a Reply

Your email address will not be published. Required fields are marked *

error: Content is protected !!