ಸುದ್ದಿವಿಜಯ,ವಿಶೇಷ: ಊಟ, ನಿದ್ರೆ, ನೀರು, ಸ್ನಾನ, ಧ್ಯಾನ ವ್ಯಾಯಾಮ ಮನುಷ್ಯನಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯವಾದ ಮತ್ತೊಂದು ನೈಸರ್ಗಿಕ ಪ್ರಕ್ರಿಯೆ ಸೆಕ್ಸ್… ಆಥವಾ ಕಾಮ. ಕಾಮದ ಕುರಿತು ಯುವಜನತೆಗೆ ಸೆಕ್ಸ್ ಗುರು ಓಶೋ ಬೋಧನೆ ತಿಳಿಯುವ ಅಗತ್ಯತೆ ಇದೆ.
ಓಶೋ ಸನ್ಯಾಸಿಯಲ್ಲದ ಸನ್ಯಾಸಿ, ಸಂತನಲ್ಲದ ಸಂತ, ಗುರುವಲ್ಲದ ಗುರು. ಭಾರತೀಯ ಸಮಾಜದ ಮಡಿವಂತಿಕೆಯನ್ನು ಮೀರಿ ಕಾಮದ ಕುರಿತಾಗಿ ಮಾತನಾಡಿ ವಿವಾದ ಸೃಷ್ಟಿಸಿಕೊಂಡವರು. ಅರಿಷಡ್ವರ್ಗಗಳನ್ನು ಮೀರದೇ ತಮ್ಮದೇ ಆದ ಭ್ರಮಾಲೋಕದಲ್ಲಿ ವಿಹರಿಸಿದವರು.
ತಾವು ರಾಯ್ಸ್ ಕಾರುಗಳ ಸಹಿತ, ದುಬಾರಿ ವಾಚುಗಳ ಸಹಿತ ಸುದ್ದಿಯಾಗುತ್ತಿದ್ದವರು. ತಮ್ಮನ್ನು ಭೇಟಿಯಾಗುತ್ತಿದ್ದ ಗಣ್ಯರಿಂದ ಅನೇಕ ತರಹೇವಾರಿ ದುಬಾರಿ ಗಿಫ್ಟುಗಳನ್ನು ಪಡೆದುಕೊಳ್ಳುತ್ತಿದ್ದವರು. ಓಶೋರನ್ನು ವಿರೋಧಿಸಬೇಕೆ ನಿಮಗೆ ಇಷ್ಟೇ ಸಂಗತಿಗಳು ದಕ್ಕುತ್ತವೆ.
ಆದರೆ ಓಶೋರನ್ನು ಇಷ್ಟಪಡುತ್ತೀರಾದರೇ ಅವರ ನೂರಾರು ಸಾವಿರಾರು ಕಥೆಗಳು, ಜೋಕ್ಸುಗಳು, ಉಪಮೆಗಳು, ವಿದ್ವತ್ ಪೂರ್ಣ ಉಪನ್ಯಾಸಗಳು ಸಿಗುತ್ತವೆ. ಓಶೋರನ್ನು ಅರ್ಥ ಮಾಡಿಕೊಳ್ಳಲೂ ಒಂದು ಮಟ್ಟಿನ ಪ್ರಬುದ್ಧತೆ ಬೇಕು, ಬೌದ್ಧಿಕವಾಗಿ ಪ್ರಬುದ್ಧರಲ್ಲದವರಿಗೆ ಓಶೋ ನಿಲುಕುವುದಿಲ್ಲ ಎಂದು ಗುರುಗಳಾದ ರವಿ ಬೆಳಗೆರೆ ಸದಾ ಹೇಳುತ್ತಿದ್ದರು.
From sex to superconsciousness ಎಂದ ಓಶೋ ಪೋಲಿಗುರುವಾಗಿಬಿಟ್ಟರು. ಭಾರತದ ಆಧ್ಯಾತ್ಮಿಕ ಮಾರುಕಟ್ಟೆಯನ್ನೇ ತನ್ನ ಕಬ್ಜಾದಲ್ಲಿಟ್ಟುಕೊಂಡಿದ್ದ ಭಗವಾನ್ ರಜನೀಶರನ್ನು ಮಡಿವಂತ ಸಮಾಜ ನೇಪಥ್ಯಕ್ಕೆ ಸರಿಸಿಬಿಟ್ಟಿತು. ಕೇವಲ 60 ವರ್ಷಗಳು ಮಾತ್ರ ಬದುಕಿದ್ದ ಓಶೋ ಆದ್ಯಾತ್ಮದ ಜೊತೆ ಬುದ್ದ, ಪ್ರೇಮ, ಸೂಫಿ, ಜೆನ್, ಬದುಕು, ಸತ್ಯದರ್ಶನ, ವ್ಯಂಗ್ಯ ವಿಡಂಬನೆ ಎಲ್ಲದರ ಬಗ್ಗೆಯೂ ನಿರರ್ಗಳ ಮಾತಾಡಿದರು.
ಆದರೆ ಓಶೋ ಬದುಕಿನ ವೇವ್ ಲೆಂತ್ ಕುಸಿತದಲ್ಲಿ ಅವರು ಕುಖ್ಯಾತರಾಗಿದ್ದು ಕೇವಲ ಸೆಕ್ಸ್ ಗುರು ಎಂದಾಗಿ ಮಾತ್ರ. ಒಂದು ಕಾಲದಲ್ಲಿ ರಾಜನಂತೆ ಮೆರೆದಿದ್ದ ವಿದೇಶಗಳಿಂದ ಗಡಿಪಾರಾಗಿ ಮತ್ತೆ ಪೂನಾದ ಆಶ್ರಮಕ್ಕೆ ಬಂದರು. ಮತ್ತೆ ಮತ್ತೆ ವಿವಾದಗಳನ್ನು ಸೃಷ್ಟಿಸಿಕೊಂಡರು, ಬದುಕಿನ ಜೊತೆ ಸಾವಿನಲ್ಲೂ ನಿಗೂಢವಾಗಿಯೇ ಉಳಿದರು.
ಓಶೋ ಒಂದೇ ಒಂದಕ್ಷರ ಬರೆಯಲಿಲ್ಲ, ಆದರೆ ಅವರು ಮಾತಾಡಿದ ಪ್ರತಿ ವಾಕ್ಯಗಳೂ ಪುಸ್ತಕವಾಗಿ ಆಧ್ಯಾತ್ಮಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡವು. ಅವರು ಮುಕ್ತ ಲೈಂಗಿಕತೆಯನ್ನು ಪ್ರತಿಪಾದಿಸಿದರು, ಲೈಂಗಿಕತೆಯ ಬಗ್ಗೆ, ಕಾಮದ ಬಗ್ಗೆ, ಮೈಥುನದ ಯೋಗಾವಸ್ಥೆಯ ಬಗ್ಗೆ ಮುಕ್ತವಾಗಿ ಮಾತಾಡಿದರು. ಬುದ್ದನಷ್ಟೇ ಕ್ರಿಸ್ತನನ್ನು ಪ್ರೀತಿಸಿದರು.
ಪ್ರಸಿದ್ಧಿಯ ತುತ್ತತುದಿಯಲ್ಲೇ ಡಿಪ್ರೆಷನ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ವಿನೋದ್ ಖನ್ನಾ ಎಂಬ ಸ್ಪುರದ್ರೂಪಿ ನಟನನ್ನು ಶಿಷ್ಯನಾಗಿ ಸ್ವೀಕರಿಸಿ ಬದುಕಿಸಿದರು. ಮೋಹ, ಮತ್ಸರ ಮತ್ತು ಲೋಭಗಳಿಗೆ ತಮ್ಮದೇ ವ್ಯಾಖ್ಯಾನ ನೀಡಿದ ಓಶೋ, ಅರಿಷಡ್ವರ್ಗಗಳನ್ನು ಮೀರುವ ಸ್ಥಿತಿಯನ್ನೇ ಬುದ್ಧ ಎಂದರು.
ಪರಂಪರೆಗಳನ್ನು ಗೊಡ್ಡು ಸಂಪ್ರದಾಯಗಳನ್ನು ಖಂಡತುಂಡವಾಗಿ ವಿರೋಧಿಸಿದರು. ಗಾಂಧಿಯನ್ನು, ಸಮಾಜವಾದವನ್ನು ಮತ್ತು ಧರ್ಮವನ್ನು ಮುಚ್ಚುಮರೆಯಿಲ್ಲದೇ ನಿರ್ಭೀಡೆಯಿಂದ ಟೀಕಿಸಿದರು.
ಇಂತಹ ಓಶೋರನ್ನು ಈವರೆಗೆ ಜಗತ್ತಿನ ಸಾವಿರ ಸಾವಿರ ಮಂದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ತಮ್ಮದೇ ಆದ ದೃಷ್ಟಿಕೋನದಲ್ಲಿ ಓಶೋರ ವ್ಯಕ್ತಿತ್ವವನ್ನು ಓರೆಹಚ್ಚಲು ಯತ್ನಿಸಿದ್ದಾರೆ.
ಓಶೋ ಯಾರಿಗೆಷ್ಟು ಅರ್ಥವಾದರು? ಒಂದು ಕಾಲದಲ್ಲಿ ನಾನು ಇಷ್ಟ ಪಟ್ಟು ಓದಿದ್ದು ಓಶೋ ಮತ್ತು ಜಿಡ್ಡು ಪುಸ್ತಕಗಳನ್ನೇ. ಓಶೋ ಅಲಿಯಾಸ್ ಭಗವಾನ್ ಅಲಿಯಾಸ್ ಆಚಾರ್ಯ ರಜನೀಶ್ ಅವರ ಒಟ್ಟಾರೆ ಬದುಕು, ಚಿಂತನೆ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದ ಕುರಿತಾಗಿ ಈ ಸಂಚಿಕೆಯಿಂದ ಬರೆಯಲು ಪ್ರೇರಣೆಯಾಗಿದೆ; ಇದು ಮೊದಲ ಅಧ್ಯಾಯ, ಒಪ್ಪಿಸಿಕೊಳ್ಳಿ.