ಅಧಿಕಾರ ಇದ್ದರೂ ಇಲ್ಲದಿದ್ದರೂ ಅಭಿವೃದ್ಧಿಗಾಗಿ ಶ್ರಮಿಸುವೆ:ಶಾಸಕ ಎಂ.ಚಂದ್ರಪ್ಪ

Suddivijaya
Suddivijaya July 16, 2022
Updated 2022/07/16 at 12:19 AM

ಸುದ್ದಿವಿಜಯ, ಭರಮಸಾಗರ: ಈ ಅಧಿಕಾರ ಶಾಶ್ವತವಲ್ಲ. ವೋಟ್ ಹಾಕಿದಾಗ, ವೋಟ್ ಹಾಕಿದ ನಂತರ ನಾಟಕವಾಡುವ ವ್ಯಕ್ತಿ ನಾನಲ್ಲ. ಅಧಿಕಾರ ಬರುತ್ತೆ ಹೋಗುತ್ತೆ ಹಾಗಂತ ವೇಷ ಬದಲಿಸಿ ನಾಟಕವಾಡುವ ಶಾಸಕ ನಾನಲ್ಲ ನಾನೇನಿದ್ದರೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪರೋಕ್ಷವಾಗಿ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಟಾಂಟ್ ಕೊಟ್ಟರು.

ಭರಮಸಾಗರ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಶುಕ್ರವಾರ 5 ಕೋಟಿ ರೂ.ವೆಚ್ಚದ ಬೃಹತ್ ಸೇತುವೆಗೆ ಗುದ್ದಲಿ ಪೂಜೆ, ಬಿಳಿಚೋಡು ಬಸವನಕೋಟೆ ರಸ್ತೆಯಿಂದ ದ್ಯಾಪನಾಹಳ್ಳಿ, ಚೌಲಿಹಳ್ಳಿ ಮತ್ತು ಕೋಡಿಹಳ್ಳಿ ನೂತನ ರಸ್ತೆ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ತಾರತಮ್ಯ ಮಾಡುವ ವ್ಯಕ್ತಿ ನಾನಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಏನು ಬೇಕು ಎಂಬುದನ್ನು ನಾನು ಯೋಚಿಸಿ ಕಾಮಗಾರಿಗಳಿಗೆ ಹಣ ಹಾಕುತ್ತಿದ್ದೇನೆ. 493 ಹಳ್ಳಿಗಳಿಗೆ 2500 ಕೋಟಿ ರೂ ಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದೇನೆ. ನೀವ್ಯಾರು ನಮ್ಮ ಊರಿಗೆ ಇಂತಹ ಕೆಲಸ ಮಾಡಿ ಎಂದು ಅರ್ಜಿ ಹಾಕಿಲ್ಲ ಆದರೂ ನಾನು ಕೆಲಸ ಮಾಡಿ ನಿಮ್ಮ ಋಣ ತೀರಿಸುವೆ ಎಂದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ

ಕೋಡಿಹಳ್ಳಿ, ಕೋಗುಂಡೆ ಗ್ರಾಮಗಳ ಮಧ್ಯೆ 1.5 ಕೋಟಿ ವೆಚ್ಚದಲ್ಲಿ ಬೃಹತ್ ಚಕ್‍ಡ್ಯಾಂ ಕಟ್ಟಿಸಿದ್ದರ ಪರಿಣಾಮ ಇಂದು ಅಂತರ್ಜಲ ಹೆಚ್ಚಾಗಿದೆ. ಈಗ ರಸ್ತೆ ಸಮಸ್ಯೆ ಮನಗಂಡು ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದೇವೆ. ಕಾಕಬಾಳಿಗೆ 1 ಕೋಟಿ ರೂ, ಅಡವಿಗೊಲ್ಲರಹಳ್ಳಿಗೆ 1 ಕೋಟಿ ರೂ, ಯಳಗೋಡು ಕೆರೆ ಅಭಿವೃದ್ಧಿಗೆ 2 ಕೋಟಿ ರೂ, ಬಸ್ತಿಹಳ್ಳಿಕೆರೆಗೆ 1 ಕೋಟಿ ರೂ. ಹೀಗೆ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ರಸ್ತೆ, ನೀರು, ನೈರ್ಮಲ್ಯ, ಆರ್‍ಓ ಪ್ಲಾಂಟ್‍ಗಳ ನಿರ್ಮಾಣಕ್ಕೆ ಒತ್ತುಕೊಟ್ಟಿದ್ದೇನೆ. ನೀವು ವೋಟ್ ಹಾಕುವುದು ಒಂದು ನಿಮಿಷದ ಕೆಲಸ. ಯೋಚಿಸಿ ವೋಟ್ ಮಾಡಿ. ಬಿಜೆಪಿ ಸರಕಾರ ಎಂದಿಗೂ ಅಭಿವೃದ್ಧಿಗೆ ಪರವಾಗಿರುತ್ತದೆ ಎಂದರು.

ಮಂಡಲ್ ನಿಕಟ ಪೂರ್ವ ಅಧ್ಯಕ್ಷ ಸಾಮಿಲ್ ಶಿವಣ್ಣ ಮಾತನಾಡಿ, ಈ ದೇಶದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡುವ ಸಕರಾರವೆಂದರೆ ಅದು ಬಿಜೆಪಿ ಸರಕಾರ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಸವರಾಜ್ ಬೊಮಾಯಿ ಅವರು ಜನಪರವಾದ ಕೆಲಸ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ಶಾಸಕ ಚಂದ್ರಪ್ಪ ಅವರು ಮಾಡಿದಷ್ಟು ಈ ಹಿಂದೆ ಯಾರೂ ಮಾಡಿಲ್ಲ. ಜನರಿಗೆ ನೇರವಾಗಿ ಏನು ಬೇಕು ಅದನ್ನು ಮನಬಿಚ್ಚಿ ಕೊಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಮಂಡಲ್ ಬಿಜೆಪಿ ಅಧ್ಯಕ್ಷ ಚೌಲಿಹಳ್ಳಿ ಶೈಲೇಶ್‍ಕುಮಾರ್, ಜಿಪಂ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಗುತ್ತಿಗೆದಾರ ಎ.ಬಲರಾಮರೆಡ್ಡಿ, ಪಿಡಬ್ಯೂಡಿ ಎಇಇ ಜಿ.ಕೃಷ್ಣಪ್ಪ, ಎಇ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಮಲ್ಲೇಶ್, ಬಿ.ಸಿ.ಯೋಗೇಶ್, ಗೌಡರ ಸಿದ್ದಪ್ಪ, ಪಣಿಯಪ್ಪ ಸೇರಿದಂತೆ ಅನೇಕರು ಉಪಸ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!