ಜಗಳೂರು: ಪಲ್ಲಾಗಟ್ಟೆ ಭ್ರಷ್ಟ ಪಿಡಿಒ ವಿರುದ್ಧ ಗ್ರಾಪಂ ಸದಸ್ಯರು ಸಿಡಿದೆದ್ದಿದ್ದು ಏನು ಮಾಡಿದ್ರು ಗೊತ್ತಾ?

Suddivijaya
Suddivijaya October 18, 2022
Updated 2022/10/18 at 4:35 AM

ಸುದ್ದಿವಿಜಯ, ಜಗಳೂರು: ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಪಂನಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕೋಟಿ ಕೋಟಿ ಹಣವನ್ನು ನುಂಗಿ ನೀರು ಕುಡಿದಿರುವ ಭ್ರಷ್ಟ ಪಿಡಿಒ ವಿರುದ್ಧ ಸದಸ್ಯರೇ ಸಿಡಿದೆದ್ದಿದ್ದಾರೆ.

14 ಮತ್ತು 15ನೇ ಹಣಕಾಸು ಯೋಜನೆಯಡಿ ಪಿಡಿಓ ಶಶಿಧರ್ ಪಾಟೀಲ್ ಹಾಗೂ ಅಧ್ಯಕ್ಷರು ನಕಲಿ ಬಿಲ್ ಗಳನ್ನು ಸೃಷ್ಟಿಸಿಕೊಂಡು ರೂ 1 ಕೋಟಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ಬಿಡುಗಡೆ ಮಾಡಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಸದಸ್ಯರು ಗ್ರಾ ಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಲ್ಲಾಗಟ್ಟೆ ಗ್ರಾಪಂ ಪಿಡಿಓ ಶಶಿಧರ್ ಪಾಟೀಲ್
ಪಲ್ಲಾಗಟ್ಟೆ ಗ್ರಾಪಂ ಪಿಡಿಓ ಶಶಿಧರ್ ಪಾಟೀಲ್

14 ಮತ್ತು 15ನೇ ಹಣಕಾಸು ಯೋಜನೆಯಡಿ 2021-22 ಹಾಗೂ 2022-23ನೇ ಸಾಲಿನಲ್ಲಿ ವಿವಿಧ ಹಂತಗಳಲ್ಲಿ ಬಿಡುಗಡೆಯಾಗಿರುವ ರೂ 1.5 ಕೋಟಿಗೂ ಹೆಚ್ಚು ಹಣವನ್ನು ನಿಯಮಬಾಹಿರವಾಗಿ ಅಸ್ತಿತ್ವದಲ್ಲೇ ಇಲ್ಲದ ಅನಧಿಕೃತ ಏಜೆನ್ಸಿಗಳ ಹೆಸರಿನಲ್ಲಿ ನಕಲಿ ವೋಚರ್ ಗಳನ್ನು ಸೃಷ್ಟಿಸಿಕೊಂಡು ಅಧ್ಯಕ್ಷ ಹಾಗೂ ಪಿಡಿಒ ಶಶಿಧರ್ ಪಾಟೀಲ್ ಅವರು ಜನವರಿ 2021ರಿಂದ ಅಕ್ಟೋಬರ್ 15, 2022ರವರೆಗೆ ಬೇಕಾಬಿಟ್ಟಿ ಹಣವನ್ನು ಡ್ರಾ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ಸದಸ್ಯರಾದ ಜಿ.ಕೆ. ಶೇಖರಪ್ಪ, ಹೊನ್ನಮ್ಮ, ರೇಣುಕಮ್ಮ, ರಮೀಜಾ, ರತ್ನಮ್ಮ, ಜಿ.ಸಿ. ಸಿದ್ದೇಶ್, ಕಲ್ಲೇಶ್, ಯಲ್ಲಮ್ಮ, ಬಸವರಾಜ್, ಹಾಗೂ ಮುರುಗೇಶ್ ಮುಂತಾದ ಸದಸ್ಯರು , ಪಂಚಾಯಿತಿ ಕಚೇರಿಯ ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ ಪ್ರತಿಭಟನೆ ನಡೆಸಿದರು.

ಪಲ್ಲಾಗಟ್ಟೆ ಗ್ರಾಮದ ಡಿಜಿಟಲ್ ಗ್ರಂಥಾಲಯದ ಪೀಠೋಪಕಣಗಳನ್ನು ಖರೀದಿಸದೇ ಇದ್ದರೂ 15ನೇ ಹಣಕಾಸು ಯೋಜನೆಯಡಿ ಖರೀದಿ ಎಂದು ರೂ 1.44 ಲಕ್ಷ ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿಗೆ ರೂ 2.41 ಲಕ್ಷ ಹಣವನ್ನು ಬಿಡುಗಡೆ ಮಾಡಿಕೊಂಡಿದ್ದು, ಪಂಚಾಯಿತಿ ವ್ಯಾಪ್ತಿಯ ಅಂಗವಿಕಲ ಕಲ್ಯಾಣಕ್ಕೆ ಒಂದೂ ಪೈಸೆಯಷ್ಟು ಖರ್ಚು ಮಾಡಿಲ್ಲ. ಬಟ್ಟೆ ಖರೀದಿಸಲು ಅವಖಾಶ ಇಲ್ಲದಿದ್ದರೂ ,ರಶ್ಮಿ ಗಾರ್ಮೆಂಟ್ಸ್ ಕ್ಲಾತ್ ಸೆಂಟರ್ , ದಾವಣಗೆರೆ ಹೆಸರಿನಲ್ಲಿ 3 ಬಿಲ್ ಸೇರಿ ರೂ 6ಲಕ್ಷಕ್ಕೂ ಹೆಚ್ಚು ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ.

ಬೀದಿ ದೀಪಗಳ ಖರೀದಿಗಾಗಿ ಕಳೆದ 8 ತಿಂಗಳಲ್ಲಿ 3 ಬಾರಿ ರೂ 7ಲಕ್ಷ ಮತ್ತು 8 ತಿಂಗಳಲ್ಲಿ ರು 8 ಲಕ್ಷ ಹಣವನ್ನು ಮೋಟಾರ್ ಪಂಪ್ ಖರೀದಿ ಹೆಸರಿನಲ್ಲಿ ನಿರಂತರವಾಗಿ ವೆಂಕಟೇಶ್ವರ ಎಲೆಕ್ಟ್ರಿಕಲ್ಸ್, ಕ್ಲಲೇಶ್ವರ ಹಾರ್ಡ್ ವೇರ್, ಮರಳುಸಿದ್ದೇಶ್ವರ ಏಜೆನ್ಸಿ, ಹಾಗು ಕೆ.ವಿ.ಎಲೆಕ್ಟ್ರಿಕಲ್ಸ್ ಹೆಸರಿನಲ್ಲಿ ವೋಚರ್ ಹಾಜರುಪಡಿಸಿ ಅಕ್ರಮವಾಗಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತ್ವರಿತ ತನಿಖೆ ನಡೆಸಿ ಪಿಡಿಒ ಶಶಿಧರ್ ಪಾಟೀಲ್ ಅವರನ್ನು ಅಮಾನತುಪಡಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಭಟನಾನಿರತ ಸದಸ್ಯರು ಒತ್ತಾಯಿಸಿದರು.

ಇಓ ಚಂದ್ರಶೇಖರ್‌ ಹೇಳಿಕೆಗೆ ಸದಸ್ಯರ ಅಸಮಾಧಾನ:

ಸಂಜೆ ವೇಳೆಗೆ ಪಂಚಾಯಿತಿ ಕಚೇರಿಗೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್ , ಪಿಡಿಒ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ಸಿಇಒ ಅವರ ಸೂಚನೆ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಹೊಸ ಅಧ್ಯಕ್ಷರ ಆಯ್ಕೆ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇಒ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಹೊಸ ಅಧ್ಯಕ್ಷರ ಆಯ್ಕೆಯಾಗುವವರೆಗೆ ಕಾಯಲು ಆಗುವುದಿಲ್ಲ. ವಿಳಂಬವಾದಷ್ಟು ಸಾಕ್ಷ್ಯ ನಾಶ ಹಾಗು ಸದಸ್ಯರಿಗೆ ಬೆದರಿಕೆ ಹಾಕುತ್ತಾರೆ. ಕೂಡಲೇ ತುರ್ತು ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಪಿಡಿಒ ಅವ್ಯವಹಾರದ ಬಗ್ಗೆ ಸಿಇಒ ಚನ್ನಪ್ಪ, ಉಪ ಕಾರ್ಯದರ್ಶಿ ಮಲ್ಲಾನಾಯ್ಕ ಅವರಿಗೆ ಲಿಖಿತವಾಗಿ ದೂರು ನೀಡಿದ್ದರೂ ಗಂಭೀರವಾಗಿ ಪರಿಗಣಿಸದೆ ಪರೋಕ್ಷವಾಗಿ ಪಿಡಿಓ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಸದಸ್ಯರು ದೂರಿದರು. ಅವ್ಯವಹಾರದ ತನಿಖೆಯನ್ನು ಕೈಗೊಳ್ಳದೇ ಇದ್ದಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸದಸ್ಯರು ಎಚ್ಚರಿಕೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!