ಸುದ್ದಿವಿಜಯ, ಜಗಳೂರು: ಕಳೆದ 5 ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ರಣ ಕಣದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ರಾಜಕೀಯ ರಣಗರಂಗದಲ್ಲಿ ಸೈದ್ಧಾಂತಿಕ ವಿರೋಧಿಗಳಾಗಿದ್ದ ಅಭ್ಯರ್ಥಿಗಳು ಚುನಾವಣೆ ಬಳಿಕ ಭಾನುವಾರ ಮೊದಲ ಬಾರಿಗೆ ಎಲ್ಲರೂ ಸಂಗಮವಾದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ರಘುಮೂರ್ತಿ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮತ್ತು ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪಿ.ರಾಜೇಶ್ ಪಟ್ಟಣದಲ್ಲಿ ಭೇಟಿಯಾಗಿದ್ದರು.
ಕಾರ್ಯಕ್ರಮ ಮುಗಿದ ನಂತರ ಶಾಸಕ ಬಿ.ದೇವೇಂದ್ರಪ್ಪ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಆಗಮಿಸಿದ ಹಾಲಿ ಮತ್ತು ಮಾಜಿ ಶಾಸಕರು ರಾಜಕೀಯ ಬದಿಗಿಟ್ಟು ಪರಸ್ಪರ ಹಸ್ತಲಾಘವದ ಮಾಡುವ ಮೂಲಕ ಸ್ನೇಹ, ಸಂಬಂಧದ ಚರ್ಚೆ ನಡೆಸಿದರು.
ಇದಕ್ಕೂ ಮೊದಲು ಶಾಸಕರ ಜನ ಸಂಪರ್ಕ ಕಚೇರಿಯ ಆವರಣದಲ್ಲಿರುವ ಸುಸಜ್ಜಿತ ಹೈಟೆಕ್ ಗ್ರಂಥಾಲಯಕ್ಕೆ ಭೇಟಿ ನೀಡಿದ ಶಾಸಕ ರಘುಮುರ್ತಿ ಆನ್ ಲೈನ್ ನೋಂದಾಣಿ ಮತ್ತು ವ್ಯವಸ್ಥಿತ ಲೈಬ್ರರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಬಿ.ದೇವೇಂದ್ರಪ್ಪ ನಿವಾಸದಲ್ಲಿ ಚಹಾ ಕೂಟದಲ್ಲಿ ಭಾಗಿಯಾದ ಎಲ್ಲರೂ ಚಹ ಸೇವಿಸಿದರು. ನಂತರ ಕ್ಷೇತ್ರದ ಅಭಿವೃದ್ಧಿಯ ಕುರಿತು ಸ್ವಲ್ಪ ಹೊತ್ತು ಚರ್ಚೆ ನಡೆಯಿತು.
ಶಾಸಕ ಬಿ.ದೇವೇಂದ್ರಪ್ಪ ತಮ್ಮ ನಿವಾಸಕ್ಕೆ ಆಗಮಿಸಿದ ಶಾಸಕ ರಘುಮೂರ್ತಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ಅವರನ್ನು ಸನ್ಮಾನಿಸಿದರು.
ನಂತರ ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ, ಇದೊಂದು ಸಹೌರ್ದ ಭೇಟಿ. ಖಾಸಗಿ ಕಾರ್ಯಕ್ರಮದ ನಿಮತ್ತ ಆಗಮಿಸಿದ ಮುಖಂಡರನ್ನು ಚಹಾ ಸೇವಿಸಲು ನಮ್ಮ ನಿವಾಸಕ್ಕೆ ಆಗಮಿಸಿ ಎಂದು ಕೋರಿಕೊಂಡ ಹಿನ್ನೆಲೆಯಲ್ಲಿ ಎಲ್ಲರೂ ಸ್ನೇಹ ಪೂರ್ವಕವಾಗಿ ಎಲ್ಲರೂ ಆಗಮಿಸಿದರು. ಪರಸ್ಪರ ಭೇಟಿಯಾಗಿದ್ದರಿಂದ ಬಹಳ ಸಂತೋಷವಾಯಿತು.
ಕ್ಷೇತ್ರದ ಅಭಿವೃದ್ಧಿಗೆ ಸಲಹೆ ನೀಡಿದ್ದಾರೆ. ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅನುಭವಿ ರಾಜಕಾರಣಿಗಳ ಸಲಹೆಗಳನ್ನು ಪಡೆದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ, ಬಿ.ಮಹೇಶ್ವರಪ್ಪ, ಜಿ.ಎಚ್.ಶಂಭುಲಿಂಗಪ್ಪ, ಸಣ್ಣಸೂರಯ್ಯ, ಸಿ.ಲಕ್ಷಣ, ತೋರಣಗಟ್ಟೆ ಜೀವಣ್ಣ, ರಂಗನಾಥ್ರೆಡ್ಡಿ, ಆದರ್ಶ, ಅನೂಪ್ರೆಡ್ಡಿ, ಗೌಸ್ ಅಹಮದ್, ತೋರಣಗಟ್ಟೆ ಬಾಲಕೃಷ್ಣ, ಪಲ್ಲಾಗಟ್ಟೆ ಶೇಖರಪ್ಪ, ಹಟ್ಟಿ ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಇದ್ದರು.