ಸುದ್ದಿವಿಜಯ ವಿಶೇಷ, ಜಗಳೂರು: ಮಳೆ ಮಾಯವಾಗಿ ಅಂತರ್ಜಲ ಪಾದಾಳ ತಲುಪಿದರೂ ಸಹ ಶತಾಯ ಗತಾಯ ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನಲ್ಲಿ ನೀರು ಹರಿಸಲು ಹೋರಾಟದ ಮಧ್ಯೆ ಈಗ ಅಡಕೆ ಗಿಡಗಳಿಗೆ ಕೆಂಪು ನುಸಿ ರೋಗ (ರೆಡ್‍ಮೈಟ್ಸ್) ಬಾಧೆ ಕಾಡಲಾರಂಭಿಸಿದೆ.
ಹೌದು, ಜಗಳೂರು ತಾಲೂಕಿನಾದ್ಯಂತ ಆರು ಸಾವಿರ ಹೆಕ್ಟೇರ್‍ಗೂ ಅಧಿಕ ಅಡಕೆ ತೋಟ ವಿಸ್ತಾರವಾಗಿದೆ. ಅದರಲ್ಲೂ ಜಗಳೂರು ಸುತ್ತಮುತ್ತ, ಕಸಬಾ ಹೋಬಳಿಯ ಜಮ್ಮಾಪುರ, ಅರಿಶಿಣಗುಂಡಿ, ಕಟ್ಟಿಗೆಹಳ್ಳಿ, ನಿಬಗೂರು, ಬಿದರಕೆರೆ, ರಸ್ತೆ ಮಾಕುಂಟೆ, ಬಿಸ್ತುವಳ್ಳಿ, ರಸ್ತೆ ಮಾಚಿಕೆರೆ, ತಾರೆಹಳ್ಳಿ, ಗೋಡೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ 2022ನೇ ಸಾಲಿನಲ್ಲಿ ಸಾಕಷ್ಟು ಅಡಕೆ ಸಸಿಗಳನ್ನು ರೈತರು ನಾಟಿ ಮಾಡಿದ್ದಾರೆ.
ಈಗಾಗಲೇ ಅವು ಎರಡು ವರ್ಷದ ಸಸಿಗಳಾಗಿದ್ದು, ನೀರಿನ ಕೊರತೆಯ ಜೊತೆಗೆ ಕೆಂಪು ನುಸಿ ಕಾಟ ರೈತರನ್ನು ಕಾಡುತ್ತಿದ್ದೆ.
ಉಷ್ಣಾಂಶದಿಂದ ಅಡಕೆ ಸಸಿಗಳು ಕೆಂಪಾಗಿರಬಹುದು ಎಂದು ಭಾವಿಸಿದ್ದರೆ ರೈತರ ಗ್ರಹಿಕೆ ತಪ್ಪು.
ಅತಿಯಾದ ಉಷ್ಣಾಂಶದ ಜೊತೆಗೆ ಎಲೆಯ ಹಿಂಭಾಗದಲ್ಲಿ ಎರಡು ಬೆರಳುಗಳ ಸಹಾಯದಿಂದ ಎಳೆದರೆ ಬೆರಳುಗಳಿಗೆ ರಕ್ತ ಮಾದರಿಯಲ್ಲಿ ಕೆಂಪು ಬ್ಯಾಕ್ಟೀಯಾಗಳು ಬರುತ್ತವೆ. ಅವು ಎಲೆಗಳ ರಸವನ್ನು ಹೀರುತ್ತಿವೆ.
ನೋಡ ನೋಡುತ್ತಿದ್ದಂತೆ ಎಲೆಗಳು ಒಣಗಲು ಆರಂಭವಾಗುತ್ತವೆ. ಇದರಿಂದ ದಿನಕ್ಕೊಂದು ಬದಲಾವಣೆಗೆ ಅಡಕೆ ಗಿಡಗಳಲ್ಲಿ ಕಾಣಬಹುದಾಗಿದೆ. ಮೊದಲೆಲ್ಲಾ ಬಿಸಿಲಿನ ತಾಪಕ್ಕೆ ಹೀಗೆ ಆಗಿರಬಹುದು ಎಂದು ಭಾವಿಸಿದ್ದ ರೈತರಿಗೆ ಈಗ ತಮ್ಮ ತೋಟಗಳಲ್ಲಿ ಆಗಿರುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗ್ರಹಿಸಬೇಕು.
ರೋಗ ಬಾಧೆಗಳ ಬಗ್ಗೆ ಸಾಮಾನ್ಯ ಜ್ಞಾನವಂತರಾಗಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ರೋಗ ಹೆಚ್ಚಾಗುವುದರನ್ನು ಗಮನಿಸಬಹುದು.
ರೋಗ ಲಕ್ಷಣಗಳು:
ಅಡಕೆ ಗಿಡದ ಎಲೆಗಳು ಹಸಿರು ಬದಲಿಗೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದಕ್ಕೆ ಕಾರಣ ವಾತಾವರಣದಲ್ಲಿ ಬದಲಾವಣೆ. ಕೀಟ ಬಾಧೆಗಳು ಒಕ್ಕರಿಸುವ ಕಾಲವಿದು.
ಮಳೆ ಕೊರತೆಯಿಂದ ಈ ರೀತಿ ಕೀಡಗಳು ಎಲೆಗಳನ್ನು ತಿನ್ನುವುದರಿಂದ ಹಸಿರಾಗಿದ್ದ ಎಲೆಗಳು ಒಂದೆರಡು ದಿನಗಳಲ್ಲಿ ಹಳದಿಯಾಗಿ ಎಷ್ಟು ನೀರು ಹರಿಸಿದರೂ ಹಳದಿಯಾಗಿ ಒಣಗಲು ಆರಂಭಿಸುತ್ತವೆ.
ಪರಿಹಾರ:
ಲಕ್ಷಾಂತರ ರೂ ಖರ್ಚು ಮಾಡಿ ಅಡಕೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರಿಗೆ ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಎಂ.ಜಿ.ಬಸವನಗೌಡ ಕೆಲವು ಔಷಧೋಪಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಲೆಗಳ ಕೆಳಗೆ ಕೆಂಪು ಚುಕ್ಕೆಗಳನ್ನು ಗುರುತಿಸಿ. ಎಲೆಗಳನ್ನು ಎರಡು ಬೆರಳುಗಳಿಂದ ಎಳೆದರೆ ಅದು ರೆಡ್‍ಮೈಟ್ಸ್ ರೋಗ ಎಂದೇ ಅರ್ಥ. ರೈತರು ಭಯ ಪಡುವ ಅಗತ್ಯವಿಲ್ಲ. ಪ್ರತಿ 4 ಎಂಎಲ್‍ಗೆ 1.5 ಮಿಲಿ ಹೆಕ್ಸಿಥಿಯೋಝಾಕ್ಸ್, ಪ್ರೊಪಿಕೊನಜೋಲ್ ಮತ್ತು ಮೈಕ್ರೋ ನ್ಯೂಟ್ರಿಯೆಂಟ್ ಅನ್ನು ಪ್ರತಿ ಲೀಟರ್‍ಗೆ 4 ಎಂಎಲ್‍ನಷ್ಟು ಬೆರೆಸಿ ಸಿಂಪಡಿಸಿದರೆ ರೆಡ್‍ಮೈಟ್ಸ್ ನಾಶವಾಗುತ್ತದೆ.
ಎಲೆಗಳ ಕೆಳಭಾಗದಲ್ಲಿ ಮತ್ತು ಸುಳಿ ನೆನೆಯುವಂತೆ ರೈತರು ಸಿಂಪಡಿಸಬೇಕು ಎಂದು ಕೆವಿಕೆ ವಿಜ್ಞಾನಿ ಎಂ.ಜಿ.ಸಬಸವನಗೌಡರು ರೈತರಿಗೆ ಸಲಹೆ ನೀಡಿದ್ದಾರೆ.