suddivijayanews01/07/2024
ಸುದ್ದಿವಿಜಯ, ಜಗಳೂರು: ಬದುಕಿಗೆ ಆಧಾರವಾಗಿರುವ ಆಧಾರ್ ನಂಬರ್ ಸರಕಾರದ ಪಂಚ ಗ್ಯಾರಂಟಿಗಳ ಸರಕಾರಿ ಸವಲತ್ತು ಪಡೆಯಲು ಅತ್ಯಂತ ಅವಶ್ಯಕ. ಆದರೆ 36 ಹಳ್ಳಿಗಳ ಬೃಹತ್ ಹೋಬಳಿಯಾಗಿರುವ ಸೊಕ್ಕೆ ಗ್ರಾಮದಲ್ಲಿ ಆಧಾರ್ ಕಾರ್ಡ್ ಲೋಪದೋಷಗಳ ತಿದ್ದುಪಡಿ ಮತ್ತಿತರ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹೋದರೆ ಆಧಾರ್ ಕೇಂದ್ರದ ಬಾಗಿಲು ಬಂದ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು. ಶಾಲಾ ದಾಖಲಾತಿ, ವೃದ್ಧಾಪ್ಯವೇತನ, ಬ್ಯಾಂಕ್ಗಳಿಗೆ ಆಧಾರ್ ಲಿಂಕ್ ಹೀಗೆ ಎಲ್ಲದಕ್ಕೂ ಆಧಾರವಾಗಿರುವ ಆಧಾರ್ ನಂಬರ್ ಪಡೆಯಲು ಸೊಕ್ಕೆ ಹೋಬಳಿಯ ಎಲ್ಲ ಎಲ್ಲ ಗ್ರಾಮಗಳ ಜನರು ನಿತ್ಯ ಅಲೆದಾಟ ಆಡಳಿತ ವ್ಯವಸ್ಥೆಯ ಕಿವಿಗೆ ಬಿದ್ದರೂ ಕಣ್ಣು, ಕಿವಿ ಕೇಳದಂತೆ ಇರುವುದಕ್ಕೆ ನಾಗರಿಕರು ಆಕ್ರೋಶಕ್ಕೆ ಕಾರಣವಾಗಿದೆ.
ಸೊಕ್ಕೆ ಗ್ರಾಮದಲ್ಲಿರುವ ನಾಡಕಚೇರಿಯಲ್ಲಿ ಇರುವ ಆಧಾರ್ ಕೇಂದ್ರ ಬಂದ್ ಆಗಿದ್ದು, ಗೋಪಾಲಪುರ, ಯರ್ಲಕಟ್ಟಿ, ಚಿಕ್ಕಬಂಟನಹಳ್ಳಿ, ಮಾಗಡಿ, ಮಾಡ್ರಳ್ಳಿ, ಮಾಲೆಮಾಚೇಕೆರೆ, ವೆಂಕಟೇಶಪುರ, ಹೊಸಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಆಧಾರ್ ಕಾರ್ಡ್ನಲ್ಲಿ ಹೆಸರು, ಜನನ ದಿನಾಂಕ,ವಿಳಾಸ ಇನ್ನು ಹಲವಾರು ಲೋಪದೋಶಗಳನ್ನು ತಿದ್ದುಪಡೆ ಮಾಡಿಸಲು ಇದೊಂದೇ ಆಧಾರ್ ಕೇಂದ್ರವಾಗಿದೆ.
ಆದರೆ ಕಳೆದ 22 ದಿನಗಳಿಂದ ಆಧಾರ್ ಕೇಂದ್ರ ಬಂದ್ ಆಗಿದ್ದು ಶೀಘ್ರವೇ ಸರಿ ಪಡಿಸಿ ಎಂದು ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಆಗ್ರಹಿಸಿದ್ದಾರೆ.
ಜಗಳೂರು ಪಟ್ಟಣದಿಂದ 20 ಕಿಮೀ ದೂರ ಇರುವ ಸೊಕ್ಕೆ ಹೋಬಳಿ ವಿಜಯನಗರ ಜಿಲ್ಲೆಯ ಗಡಿ ಗ್ರಾಮ ಆ ಭಾಗದ ಜನ ಆಧಾರ್ ತಾಂತ್ರಿಕ ದೋಷ ಸರಿಪಡಿಸಲು ಈಗ ಜಗಳೂರು ಪಟ್ಟಣಕ್ಕೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತಾಪಿ ವರ್ಗದವರು ಹೆಚ್ಚಿರುವ ಈ ಭಾಗದಲ್ಲಿ ಆಧಾರ್ ದೋಷಗಳನ್ನು ಸರಿಪಡಿಸಲು ಕೆಲಸ ಕಾರ್ಯಗಳನ್ನು ಬಿಟ್ಟು ಹಣ ಖರ್ಚು ಮಾಡಿಕೊಂಡು ಬಂದು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ನಾಗರಿಕರಾದ ಸಾಕಮ್ಮ ಎಂಬ ವೃದ್ಧೆ ತಮ್ಮ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಸೊಕ್ಕೆ ಗ್ರಾಮದಲ್ಲಿರುವ ಆಧಾರ್ ಕೇಂದ್ರವನ್ನು ಹೆಚ್ಚುವರಿ ಲಾಗಿನ್ ಆಗಿದೆ ಅಂತ ಬ್ಲಾಕ್ಲಿಸ್ಟ್ ಮಾಡಲಾಗಿದೆ.ಗ್ರಾಪಂ ವತಿಯಿಂದ ಆಧಾರ್ ಕೇಂದ್ರ ಬಂದ್ ಆಗಿರುವ ಬಗ್ಗೆ ನನಗೆ ಮಾಹಿತಿಯನ್ನು ನೀಡಿದ್ದಾರೆ.ಈ ವಿಚಾರವಾಗಿ ಡಿಸಿ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.