ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಕೊಡುಗೆ ಏನು? ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಪ್ರಶ್ನಿಸಿದರು.
ಚುನಾವಣೆ ಹಿನ್ನೆಲೆ ಶುಕ್ರವಾರ ಬಿಜೆಪಿ ಪಕ್ಷದ ನೂತನ ಕಚೇರಿ ಮತ್ತು ಕಾಲ್‍ಸೆಂಟರ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.;
ಡಬಲ್ ಎಂಜಿನ್ ಸರಕಾರ ಕ್ಷೇತ್ರಕ್ಕೆ 3500 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ನೀಡಿದೆ. ಅಪ್ಪರ್ ಭದ್ರಾ, 57 ಕೆರೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಮೂಲಸೌಕರ್ಯಗಳ ವೃದ್ಧಿಗೆ ಕೋಟ್ಯಂತರ ರೂ ಖರ್ಚು ಮಾಡಿದೆ. ಆದರೆ ಮಾಜಿ ಶಾಸಕರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ನಾ ಭೂತೋ ನಾ ಭವಿಷ್ಯತಿ ಎಂಬತೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಗೆಲುವು ನಿಶ್ಚಿತ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೇ.13 ರಂದು ಫಲಿತಾಂಶ ಬರಲಿದೆ.
ನಮ್ಮ ಪಕ್ಷ 150 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಸೋಲುತ್ತಾರೆ. ಕಾಂಗ್ರೆಸ್ ಬಂಡಾಯದಿಂದ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ ಎಂದು ಭವಿಷ್ಯ ನುಡಿದರು.
ಕಳೆದ ಬಾರಿ 29 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದ ಎಸ್.ವಿ.ರಾಮಚಂದ್ರ ಈ ಬಾರಿ 50 ಸಾವಿರ ಮತಗಳಿಂದ ಗೆಲ್ಲುತ್ತಾರೆ. ವಿಶ್ವಗುರು ನರೇಂದ್ರ ಮೋದಿ ಅವರು ಕೋವಿಡ್ ಸಮಯದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು ಜನ ಮರೆತಿಲ್ಲ.
ರಾಜ್ಯ ಮತ್ತು ಕೇಂದ್ರ ಸರಕಾರಗಳು 10 ಸಾವರ ರೂಗಳನ್ನು ರೈತರ ಬ್ಯಾಂಕ್ ಖಾತೆಗೆ ಹಾಕುವ ಮೂಲಕ ನೆರವಾಗುತ್ತಿದ್ದಾರೆ. ಚುನಾವಣಾ ಯುದ್ಧದಲ್ಲಿ ಸೋಲದೇ ಗೆದ್ದು ತೋರಿಸಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ನಾಲ್ಕನೇ ಬಾರಿಯೂ ಎಚ್.ಪಿ.ರಾಜೇಶ್ ಸೋಲಿಸುವೆ:
ನನ್ನ ವಿರುದ್ಧ ಮೂರು ಬಾರಿ ಸೋತಿರುವ ರಾಜೇಶ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುತ್ತೇನೆ. ನಾನು ಸುಳ್ಳು ಹೇಳುತ್ತಿಲ್ಲ. ನಾಳೆ ಮಾದಮುತ್ತೇನಹಳ್ಳಿ ಗ್ರಾಮದಿಂದ ಪ್ರಚಾರ ಆರಂಭಿಸಿದ್ದೇನೆ.
ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಬರುತ್ತಾರೆ. ಅಲ್ಲಿ ನಮ್ಮ ಶಕ್ತಿ ಪ್ರದರ್ಶನವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುಜರಾತ್ ಮಾಜಿ ಶಾಸಕರ ಹಾಗೂ ತಾಲೂಕು ಉಸ್ತುವಾರ ಸಂಜಯ್ ಬಾಯ್ ಪಟೇಲ್, ಆರುಂಡಿನಾಗರಾಜ್, ಡಿ.ವಿ.ನಾಗಪ್ಪ, ಮಂಡಲ್ ಅಧ್ಯಕ್ಷ ಎಚ್.ಸಿ.ಮಹೇಶ್, ಇಂದಿರಾ ರಾಮಚಂದ್ರ, ಜಿಪಂ ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಬಿಸ್ತುವಳ್ಳಿ ಬಾಬು ಸೇರಿದಂತೆ ಅನೇಕರು ಇದ್ದರು.