ಸುದ್ದಿವಿಜಯ, ಜಗಳೂರು: ಭಾನುವಾರ ರಾತ್ರಿ ತಾಲೂಕಿನ ಅನೇಕ ಕಡೆ ಗುಡುಗು ಸಹಿತ ಕೃತಿಕಾ ಮಳೆ ಅಬ್ಬರಿಸಿದ್ದು, ಅಂದಾಜು 60 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಾಲೂಕಿನ ಗಡಿಮಾಕುಂಟೆ, ಸೊಕ್ಕೆ, ಚಿಕ್ಕಉಜ್ಜಿನಿ, ಕ್ಯಾಸೇನಹಳ್ಳಿ, ಗೌರಿಪುರ, ಲಕ್ಕಂಪುರ, ಕೆಚ್ಚೇನಹಳ್ಳಿ ಸೇರಿಂತೆ ಅನೇಕ ಗ್ರಾಮಗಳಲ್ಲಿ ಧಾರಕಾರ ಮಳೆಯಾಗಿದೆ.
ಗಡಿಮಾಕುಂಟೆ ಕೆರೆಗೆ ನೀರು:
ತಾಲೂಕಿನ ಬೃಹತ್ ಕೆರೆ ಎಂದೇ ಹೆಸರಾಗಿರುವ ಗಡಿಮಾಕುಂಟೆ ಕೆರೆ 2022ರಲ್ಲಿ ಅಷ್ಟು ಮಳೆ ಬಂದರೂ ತುಂಬಿರಲಿಲ್ಲ. ಆದರೆ ರಾತ್ರಿ ಸುರಿದ ಮಳೆಗೆ ಶೇ.30ರಷ್ಟು ನೀರು ಕೆರೆಗೆ ಹರಿದು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.ಜಗಳೂರು ತಾಲೂಕಿನ ಗಡಿ ಮಾಕುಂಟೆ ಗ್ರಾಮದ ಕೆರೆಗೆ ಮಳೆಯಿಂದ ಹರಿದು ಬಂದ ನೀರು.
ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಜಯಶೀಲ ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡದ ಮೇಲ್ಭಾಗದ ಸಿಮೆಂಟ್ ಶೀಟ್ಗಳು ಭಾಗಶಃ ಹಾರಿ ಹೋಗಿದೆ. ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರ ಸರ್ಕಲ್ ನಲ್ಲಿ ಮೂಕಣ್ಣ ಎಂಬುವವರಿಗೆ ಸೇರಿದ ಅಂಗಡಿಯ ಮುಂಭಾಗದ ಶೀಟ್‍ಗಳು ಹಾರಿ ಹೋಗಿದೆ.ಗ್ರಾಮದ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳ ಮೇಲೆ ರೆಂಬೆಗಳು ಬಿದ್ದಿವೆ. ಬೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಧರೆಗುರುಳಿದ ಮರಗಳು:
ಚಿತ್ರದುರ್ಗ ರಸ್ತೆ ಸಂಪರ್ಕಿಸುವ ಬಿಸ್ತುವಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ಮೂರು ಮರಗಳು ಧರೆಗುರುಳಿವೆ. ಹೀಗಾಗಿ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.
ಮಾಳಮ್ಮಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಜೆಜೆಎಂ ಕಾಮಗಾರಿಯ ಓವರ್ ಟ್ಯಾಂಕ್‍ಗೆ ಅಳವಡಿಸಿಲಾಗಿರುವ ಕಬ್ಬಿಣದ ಏಣಿ ಬಿರುಗಾಳಿಗೆ ಮುರಿದು ಬಿದ್ದಿದೆ.
ಒಟ್ಟಿನಲ್ಲಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕೃತಿಕಾ ಮಳೆಯ ಅಬ್ಬರ ಜೋರಾಗಿದ್ದು, ಬರಗಾಲದಿಂದ ನೊಂದ ಜೀವಗಳಿಗೆ ನೆಮ್ಮದಿ ತಂದಿದೆ.