ಸುದ್ದಿವಿಜಯ, ಜಗಳೂರು: ಧರ್ಮ ಸಮನ್ವಯ, ಕಾಯಕ ದಾಸೋಹ ಸೇವೆ, ಶಿಕ್ಷಣ ಪ್ರಸಾರ ಈ ಮೂರು ಮಹತ್ವಗಳ ಮಹಾಮನೆಯಾಗುವುದರ ಜೊತೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ಕೀರ್ತಿ ಸುತ್ತೂರು ಮಠದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಪ್ರಭಾಕರ್ ಲಕ್ಕೊಳ್ ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ದಿವ್ಯ ಭಾರತಿ ಪ್ರೌಢಶಾಲೆ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂಸ್ಥಾಪಕ ದಿನಾಚರಣೆಯಲ್ಲಿ ಮಾತನಾಡಿದ ಅವರು,
ಸುತ್ತೂರು ಶ್ರೀಗಳು ವಚನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿದರು. ಬಸವಾದಿ ಶರಣರ ವಚನಗಳ ಪ್ರಸಾರ ಹಾಗೂ ಪ್ರಚಾರದಲ್ಲಿ ಸ್ವಾಮೀಜಿಗಳ ಸೇವೆಯನ್ನು ನಾವು ಮರೆಯಲಾಗದು ಎಂದು ನೆನಪುಗಳನ್ನು ಮೆಲಕುಹಾಕಿದರು.
ಶರಣರ ಚಿಂತನೆ ಮತ್ತು ಜೆ.ಎಂ.ಇಮಾಂ ವಿಷಯ ಕುರಿತು ಸಾಹಿತಿ ಎನ್.ಟಿ ಎರ್ರಿಸ್ವಾಮಿ ಮಾತನಾಡಿ, ಜೆ.ಎಂ. ಇಮಾಮ್ ಹುಟ್ಟಿನಿಂದ ಮುಸ್ಲಿಮರಾದರೂ ಬದುಕಿನಿಂದ ಭಾರತೀಯರು. ಅವರು ಜಾತಿಯ ಸೋಂಕಿಲ್ಲದ ವ್ಯಕ್ತಿ. ಧರ್ಮವನ್ನು ಮೀರಿದ ಹೃದಯವಂತ.
ಭಕ್ತಿಯಲ್ಲಿ ಹನುಮಂತ, ಭಾವೈಕ್ಯತೆಯಲ್ಲಿ ಧೀಮಂತ. ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮಂತ್ರಿಯಾಗಿ ವಿಧಾನಸಭೆ ,ಲೋಕಸಭೆಯ ಹಿರಿಯ ಸದಸ್ಯರಾಗಿ ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದರು.
ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಅವರು ಸರಳ ಸಜ್ಜನಿಕೆ ಸಂಪನ್ನ ಸಚ್ಚಾರಿತ್ರದ ವ್ಯಕ್ತಿಯಾಗಿ ಬದುಕಿದವರು. ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯ ಎಂದು ಹೇಳಿದರು.
ನಾಲಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ .ತಿಪ್ಪೇಸ್ವಾಮಿ, ನಾಲಂದ ಕಾಲೇಜಿನ ಉಪನ್ಯಾಸಕ ಬಿ. ಎನ್. ಎಂ ಸ್ವಾಮಿ ಮಾತನಾಡಿ, ವಿದ್ಯಾರತ್ನ ಡಾ. ಟಿ ತಿಪ್ಪೇಸ್ವಾಮಿ ಯವರು ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಪರಿಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ದಿವ್ಯ ಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಬಿ. ಬಾಲರಾಜು, ಜೆ.ಕೆ.ಹುಸೇನ್ ಮಿಯಾ ಸಾಬ್’ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಜೆ.ಆರ್. ಗೌರಮ್ಮ, ನಿವೃತ್ತ ಉಪನ್ಯಾಸಕರಾದ ಡಿ.ಸಿ.ಮಲ್ಲಿಕಾರ್ಜುನ, ಪರಿಷತ್ತಿನ ಲೀಲಾವತಿ, ರೇವತಿ, ನಾಗರತ್ನ, ಮಂಜುನಾಥ್ ಮತ್ತಿತರರು ಇದ್ದರು.